ಮಂಗಳೂರು : ಕೊಂಕಣಿ ಸಾಂಸ್ಕೃತಿಕ ಸಂಘಟನೆ ‘ಮಂಡ್ ಸೊಭಾಣ್’ನ 40ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿರುವ ಪ್ರಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಮಂಗಳವಾರ ಮುಂಜಾನೆ 5 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಅದ್ದೂರಿ ಚಾಲನೆ ದೊರೆಯಿತು. ನವೆಂಬರ್ 3ರಿಂದ 15ರವರೆಗೆ 13 ದಿನಗಳ ಕಾಲ ನಡೆಯಲಿರುವ ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಉದ್ಘಾಟಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಈ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ‘ಕೊಂಕಣಿ ನಿರೊಂತರಿ – ಸೊಂಸಾರ್ ಸೊರಾಸೊರಿ’ ಎಂಬ ಹೆಸರಿನಲ್ಲಿ 12 ದಿನಗಳ ಕಾಲ ನಿರಂತರ ಗಾಯನ ಮ್ಯಾರಥಾನ್ ಆಯೋಜಿಸಲಾಗಿದ್ದು, ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ ನಡೆಯಲಿದೆ. ಈ ಮ್ಯಾರಥಾನ್ನಲ್ಲಿ ಜಗತ್ತಿನ ವಿವಿಧ ಭಾಗಗಳಿಂದ 300ಕ್ಕೂ ಹೆಚ್ಚು ತಂಡಗಳು ಹಾಗೂ 6,700ಕ್ಕೂ ಅಧಿಕ ಗಾಯಕರು ಭಾಗವಹಿಸಲಿದ್ದಾರೆ. ಯಾವುದೇ ಹಾಡು ಅಥವಾ ಗಾಯಕನ ಪುನರಾವರ್ತನೆಯಿಲ್ಲದೆ 4,500ಕ್ಕೂ ಅಧಿಕ ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸುವ ಗುರಿ ಹೊಂದಲಾಗಿದೆ.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಮಂಡ್ ಸೊಭಾಣ್ ಸಂಘಟನೆಯ ಶ್ರಮವನ್ನು ಶ್ಲಾಘಿಸಿದರು. ಗೋವಾದ ಹೊರಗಿದ್ದರೂ ಮಂಗಳೂರಿನ ಕೊಂಕಣಿ ಭಾಷಿಕರು ತಮ್ಮ ಪರಿಶ್ರಮದಿಂದ ಭಾಷೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ ಎಂದರು. ಇದೇ ವೇಳೆ ಗೋವಾದ ಹೊರಗಿರುವ ಕೊಂಕಣಿ ಸಾಧಕರನ್ನೂ ಗೋವಾ ಸರ್ಕಾರದ ಅಧಿಕೃತ ರಾಜ್ಯ ಪ್ರಶಸ್ತಿಗಳಿಗೆ ಪರಿಗಣಿಸಲಾಗುವುದು ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಮೈಕಲ್ ಲೋಬೋ, ಕೊಂಕಣಿ ಸಂಸ್ಕೃತಿಗೆ ದಿವಂಗತ ಎರಿಕ್ ಒಝಾರಿಯೊ ಅವರ ಜೀವಮಾನದ ಕೊಡುಗೆಯನ್ನು ಸ್ಮರಿಸಿದರು. ಬೆಳಿಗ್ಗೆ 6 ಗಂಟೆಗೆ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಸಾಂಪ್ರದಾಯಿಕ ಗುಮಟ ವಾದ್ಯ ನುಡಿಸುವ ಮೂಲಕ ನಿರಂತರ ಗಾಯನ ಮ್ಯಾರಥಾನ್ಗೆ ಅಧಿಕೃತ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕರಾವಳಿ ಕರ್ನಾಟಕ ಹಾಗೂ ಗೋವಾದ ಜನಪ್ರತಿನಿಧಿಗಳು ಮತ್ತು ಸಾಂಸ್ಕೃತಿಕ ಗಣ್ಯರು ಉಪಸ್ಥಿತರಿದ್ದರು.