ಮಂಗಳೂರು: ಗ್ರಾಮೀಣ ಭಾಗದ ಜನರ ಸಮಸ್ಯೆ ಗಳ ಬಗ್ಗೆ ಪ್ರಜಾಪ್ರಭುತ್ವದ ನಾಲ್ಕನೆ ಅಂಗವೆಂದು ಪರಿಗಣಿಸಲ್ಪಟ್ಟ ಮಾಧ್ಯಮ ರಂಗದ ಪ್ರತಿನಿಧಿಗಳು ಗಮನ ಹರಿಸಿ,ನಿವಾರಣೆಗೆ ನಿರಂತರವಾಗಿ ಪ್ರಯತ್ನಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಎಂಸಿಎಫ್ ಸಂಸ್ಥೆಯ ಸಿಎಸ್ ಆರ್ ನಿಧಿಯ ಮೂಲಕ ಕುತ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೋಮವಾರ ಸಮವಸ್ತ್ರ ವಿತರಿಸಿ ಮಾತನಾಡಿ, ಮಾಧ್ಯಮಗಳು ಜನರ ಸಮಸ್ಯೆ ಗಳ ಬಗ್ಗೆ ಬೆಳಕು ಚೆಲ್ಲುವುದರ ಜೊತೆಗೆ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತದ ಜೊತೆ ಅಲ್ಲಿನ ಸ್ಥಳೀಯ ಜನರ ಜೊತೆ ಸೇರಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ .ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಗ್ರಾಮೀಣ ಭಾಗದಲ್ಲಿ ನಡೆಸುತ್ತಿರುವ ಗ್ರಾಮ ವಾಸ್ತವ್ಯದ ಮೂಲಕ ಅವರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ ರುವುದು ಮತ್ತು ಆ ಸಮಸ್ಯೆ ಪರಿಹರಿಸಲು ಗ್ರಾಮದ ಜನರು ಜೊತೆ ಸೇರಿ ಮಾಡುತ್ತಿರುವ ಕೆಲಸ ತಾನು ಇತರ ಕಡೆ ನೋಡಿಲ್ಲ ಇದು ಜಿಲ್ಲೆಯ ಅಭಿವೃದ್ಧಿ ಗೆ ಪೂರಕ ಎಂದರು.
ಇದೇ ಸಂದರ್ಭದಲ್ಲಿ ಕುತ್ಲೂರು ಗ್ರಾಮದ ಸಾಹಸ ಪ್ರವಾಸೋದ್ಯಮ ಸಾಕ್ಷ್ಯ ಚಿತ್ರದ ಮೂಲಕ ಪ್ರಶಸ್ತಿ ಪಡೆದ ಕುತ್ಲೂರು ಗ್ರಾಮದ ಪ್ರತಿನಿಧಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸನ್ಮಾನಿಸಿದರು. ಸಮಾರಂಭದ ವೇದಿಕೆಯಲ್ಲಿ ಎಂಸಿಎಫ್ ನ ಚೀಫ್ ಪ್ರೊಡಕ್ಷನ್ ಆಫೀಸರ್ ಗಿರೀಶ್ ಎಂಸಿಎಫ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸುತ್ತಾ,ಕುತ್ಲೂರು ಗ್ರಾಮಾಂತರ ಪ್ರದೇಶ ಸೇರಿದಂತೆ ಸಂಸ್ಥೆಯ ಸಿಎಸ್ ಆರ್ ನಿಧಿಯ ವತಿಯಿಂದ ಸುಮಾರು 350 ಮಕ್ಕಳಿಗೆ ಈ ಬಾರಿ ಸಮವಸ್ತ್ರ ನೀಡಲು ಸಂತೋಷ ಪಡುವುದಾಗಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪ್ರೊಬೆಷನರಿ ಐಎಎಸ್ ಅಧಿಕಾರಿ ಶ್ರವಣ ಕುಮಾರ್, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ,ಎಂಸಿಎಫ್ ಸಾರ್ವಜನಿಕ ಸಂಪರ್ಕಾಧಿ ಕಾರಿ ಅವಿನಂದನ್, ಕುತ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್,ಯೆನೆಪೋಯ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ದೀಕ್ಷಿತಾ ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿ, ಪ್ರದಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.