ಮಂಗಳೂರು: ಹವಾಮಾನ ವೈಪರೀತ್ಯದ ಕಾರಣದಿಂದ ಮುಂಬರುವ ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆಯಿದ್ದು, ಸಾರ್ವಜನಿಕರಲ್ಲಿ ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆ ಕುರಿತು ವ್ಯಾಪಕ ಅರಿವು ಮತ್ತು ಜಾಗೃತಿ ಮೂಡಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಪಡೀಲ್ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮುಂದಿನ ಬೇಸಿಗೆಯಲ್ಲಿ ನೀರಿಗಾಗಿ ಯಾವುದೇ ರೀತಿಯಲ್ಲಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಕುಡಿಯುವ ನೀರನ್ನು ಅನಶ್ಯಕವಾಗಿ ಪೋಲು ಮಾಡದೆ, ಮಿತವಾಗಿ ಹಾಗೂ ಜಾಗರೂಕತೆಯಿಂದ ಬಳಸಲು ಸಾರ್ವಜನಿಕರಲ್ಲಿ ವಿನಂತಿಸಬೇಕು ಹಾಗೂ ಸ್ಥಳೀಯಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳ ಮುಖಾಂತರ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲು ಅವರು ಸೂಚಿಸಿದರು.
ಕುಡಿಯುವ ನೀರಿನ ಪೂರೈಕೆ ಮತ್ತು ಸಂಬಂಧಿತ ಅಂದಾಜು ಕಾಮಗಾರಿಗಳ ವೆಚ್ಚಕ್ಕಾಗಿ ಜಿಲ್ಲಾಧಿಕಾರಿ ಹಾಗೂ ತಾಲೂಕು ತಹಶೀಲ್ದಾರರ ಖಾತೆಯಲ್ಲಿ ಈಗಾಗಲೇ ಸಾಕಷ್ಟು ಅನುದಾನ ಲಭ್ಯವಿದ್ದು, ಒಂದು ವೇಳೆ ಈ ಅನುದಾನ ಸಾಲದಿದ್ದಲ್ಲಿ ಹೆಚ್ಚುವರಿ ಹಣಕಾಸಿನ ಅಗತ್ಯವಿದ್ದಲ್ಲಿ ತಕ್ಷಣವೇ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಅನುದಾನ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.