ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ಏಕತಾ ವೇದಿಕೆಯಲ್ಲಿ "ಕನಸುಗಳು -2026” ಕಾರ್ಯಕ್ರಮದ ಸಮಾರೋಪ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಾಜ್ಯದ ವಿವಿಧೆಡೆಯಿಂದ ಸುಮಾರು 750ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯೂಟ್ಯೂಬರ್ ಹಾಗೂ ನಟ ಧನರಾಜ್ ಆಚಾರ್, ವಿದ್ಯಾರ್ಥಿಗಳು ಋಣಾತ್ಮಕ ಆಲೋಚನೆಗಳನ್ನು ಕೈಬಿಟ್ಟು ಧನಾತ್ಮಕ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಧನಾತ್ಮಕ ಆಲೋಚನೆಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆಯ ಕೌಶಲ್ಯವನ್ನು ಬೆಳೆಸಲು ಸಹಕಾರಿಯಾಗುವುದಲ್ಲದೆ, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ನಿರಂತರ ಪ್ರಯತ್ನದ ಮೂಲಕ ಸಾಧನೆಯ ಹಾದಿಯಲ್ಲಿ ಮುನ್ನಡೆಯುವಂತೆ ಅವರು ಕರೆ ನೀಡಿದರು.
ವಿಶೇಷ ಅಭ್ಯಾಗತರಾಗಿ ಆಗಮಿಸಿದ ಖ್ಯಾತ ವೈದ್ಯರು ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ವೇಣುಗೋಪಾಲ ಶರ್ಮ ಮಾತನಾಡಿ, ಕನಸುಗಳನ್ನು ಹೊತ್ತು ಬರುವ ವಿದ್ಯಾರ್ಥಿಗಳಿಗೆ ವಿವೇಕಾನಂದದಂತಹ ಸಂಸ್ಥೆಯು ಸಾಕಷ್ಟು ಅವಕಾಶಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇಂತಹ ಸದಾವಕಾಶಗಳನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ. ಮಾತನಾಡಿ, ಸಂಭ್ರಮದ ಜೀವನ ಅರ್ಥಪೂರ್ಣವಾಗಬೇಕಾದರೆ ಸಂತೋಷದೊಂದಿಗೆ ಸಾರ್ಥಕತೆಯೂ ಇರಬೇಕು ಮತ್ತು ನಿಸ್ವಾರ್ಥತೆಯಿಂದ ಕೂಡಿದ ಕಾರ್ಯಗಳಿಗೆ ಮಾತ್ರ ಸಮಾಜದ ಬೆಂಬಲ ಸಿಗುತ್ತದೆ ಎಂದರು. ಶಿಕ್ಷಣ ಮತ್ತು ಸಂಸ್ಕಾರಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಬದುಕಿಗೊಂದು ನಿಜವಾದ ಅರ್ಥ ಬರಲು ಸಾಧ್ಯ ಎಂದು ಅವರು ನುಡಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿಯ ನಿರ್ದೇಶಕರಾದ ಡಾ. ಕೆ.ಎನ್. ಸುಬ್ರಹ್ಮಣ್ಯ, ವತ್ಸಲಾ ರಾಜ್ಯ ಹಾಗೂ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ. ಉಪಸ್ಥಿತರಿದ್ದರು. ಕನಸುಗಳು ಕಾರ್ಯಕ್ರಮದ ಸಂಯೋಜಕಿಯಾದ ದೀಕ್ಷಿತಾ ಬಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ವಿವಿಧ ಸಂಸ್ಥೆಗಳ ಶಿಕ್ಷಕರು ಹಾಗೂ ಪಾಲಕರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಉಪನ್ಯಾಸಕಿಯರಾದ ದಿವ್ಯಾ ಜಿ. ವಂದಿಸಿದರು ಮತ್ತು ಹರ್ಷಿತಾ ಪಿ. ಕಾರ್ಯಕ್ರಮವನ್ನು ನಿರೂಪಿಸಿದರು.