ಮಂಗಳೂರು : ಮಂಗಳೂರು-ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಶವಂತಪುರಕ್ಕೆ (ಬೆಂಗಳೂರು) ವಿಸ್ತರಿಸಲಾಗಿದ್ದು, ರೈಲ್ವೆ ಮಂಡಳಿಯು ಇದರ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ವೇಳಾಪಟ್ಟಿಯಂತೆ ಈ ರೈಲಿಗೆ ಮಾರ್ಗಮಧ್ಯೆ ಒಟ್ಟು 12 ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ಸೇವೆಯು ಯಶವಂತಪುರದಿಂದ ಬುಧವಾರ ಹೊರತುಪಡಿಸಿ ಹಾಗೂ ಮಡಗಾಂವ್ ಕಡೆಯಿಂದ ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳ ಕಾಲ ಲಭ್ಯವಿರಲಿದೆ.
ಯಶವಂತಪುರದಿಂದ ಹೊರಡುವ ರೈಲು ಬೆಳಿಗ್ಗೆ 7.35ಕ್ಕೆ ಪ್ರಯಾಣ ಆರಂಭಿಸಲಿದ್ದು, ಶ್ರವಣಬೆಳಗೊಳಕ್ಕೆ ಬೆಳಿಗ್ಗೆ 9.03, ಹಾಸನಕ್ಕೆ 9.38, ಸಕಲೇಶಪುರಕ್ಕೆ 10.20, ಸುಬ್ರಹ್ಮಣ್ಯ ರಸ್ತೆಗೆ ಮಧ್ಯಾಹ್ನ 12.40, ಕಬಕ ಪುತ್ತೂರಿಗೆ 1.25, ಮಂಗಳೂರು ಜಂಕ್ಷನ್‌ಗೆ ಮಧ್ಯಾಹ್ನ 3.05, ಉಡುಪಿಗೆ ಸಂಜೆ 4.20, ಕುಂದಾಪುರಕ್ಕೆ 4.28, ಮೂಕಾಂಬಿಕಾ ರಸ್ತೆ ಬೈಂದೂರಿಗೆ ಸಂಜೆ 5.30, ಮುರುಡೇಶ್ವರಕ್ಕೆ ಸಂಜೆ 6.00, ಗೋಕರ್ಣ ರಸ್ತೆಗೆ ರಾತ್ರಿ 7.00, ಕಾರವಾರಕ್ಕೆ ರಾತ್ರಿ 7.45 ಹಾಗೂ ಮಡಗಾಂವ್‌ಗೆ ರಾತ್ರಿ 8.55ಕ್ಕೆ ತಲುಪಲಿದೆ.
ಮರುಪ್ರಯಾಣದಲ್ಲಿ ಮಡಗಾಂವ್‌ನಿಂದ ಬೆಳಿಗ್ಗೆ 8.20ಕ್ಕೆ ಹೊರಡಲಿದ್ದು, ಕಾರವಾರಕ್ಕೆ ಬೆಳಿಗ್ಗೆ 9.03, ಗೋಕರ್ಣ ರಸ್ತೆಗೆ 9.48, ಮುರುಡೇಶ್ವರಕ್ಕೆ 11.00, ಮೂಕಾಂಬಿಕಾ ರೋಡ್ ಬೈಂದೂರಿಗೆ 11.20, ಕುಂದಾಪುರಕ್ಕೆ 11.48, ಉಡುಪಿಗೆ ಮಧ್ಯಾಹ್ನ 12.18, ಮಂಗಳೂರು ಜಂಕ್ಷನ್‌ಗೆ 1.50, ಕಬಕ ಪುತ್ತೂರಿಗೆ 2.43, ಸುಬ್ರಹ್ಮಣ್ಯ ರಸ್ತೆಗೆ 3.28, ಸಕಲೇಶಪುರಕ್ಕೆ ಸಂಜೆ 5.30, ಹಾಸನಕ್ಕೆ 6.13, ಶ್ರವಣಬೆಳಗೊಳಕ್ಕೆ ಸಂಜೆ 6.43 ಮತ್ತು ಯಶವಂತಪುರಕ್ಕೆ ರಾತ್ರಿ 9.15ಕ್ಕೆ ಬಂದು ತಲುಪಲಿದೆ. ಉದ್ಘಾಟನಾ ದಿನಾಂಕವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ರೈಲ್ವೆ ಮಂಡಳಿ ತಿಳಿಸಿದೆ.
ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಎತ್ತರಿಸಿದ ವಿಭಾಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಬೆಂಗಳೂರಿಗೆ ಆಗಮಿಸಲಿದ್ದು, ಅದೇ ದಿನ ಈ ಯಶವಂತಪುರ-ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲಿಗೂ ಚಾಲನೆ ನೀಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ರೈಲು ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗವನ್ನು ಸಂಪೂರ್ಣವಾಗಿ ಒಳಗೊಳ್ಳುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈಲ್ವೆ ಹೋರಾಟಗಾರ ಕೆ.ಎನ್. ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ, ಬೆಂಗಳೂರು ಮತ್ತು ಮುಂಬೈ ನಡುವಿನ ನೂತನ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ನ ಉದ್ಘಾಟನಾ ವಿಶೇಷ ರೈಲಿಗೆ (ಸಂಖ್ಯೆ 27651/652) ನವೆಂಬರ್ 1ರಂದು ಬೆಳಿಗ್ಗೆ 9.45ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ವಿ. ಸೋಮಣ್ಣ, ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಸಂಸದರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ.