ಮಂಗಳೂರು : ದ್ವೇಷದ ರಾಜಕಾರಣ ಹಾಗೂ ಅಕ್ರಮ ನುಸುಳುಕೋರರ ಹೆಸರಿನಲ್ಲಿ ಭೀತಿ ಹುಟ್ಟಿಸಿದ್ದ ಬಿಜೆಪಿ ನಾಯಕರ ಸುಳ್ಳುಗಳು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅಂತಿಮ ವರದಿಯಿಂದ ಬಯಲಾಗಿವೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ಬಾಂಗ್ಲಾದೇಶಿಗರು ಮತ್ತು ಪಾಕಿಸ್ತಾನಿಗಳು ಅಕ್ರಮವಾಗಿ ನುಸುಳಿದ್ದಾರೆ ಎಂದು ಬಿಜೆಪಿ ನಾಯಕರು ಕಟ್ಟುಕಥೆ ಕಟ್ಟಿ ಜನರಲ್ಲಿ ಭೀತಿ ಹುಟ್ಟಿಸಿದ್ದರು. ಆದರೆ ಅಂತಿಮವಾಗಿ ಪತ್ತೆಯಾಗಿದ್ದು ಕೇವಲ ಇಬ್ಬರು ಮಹಿಳೆಯರು ಮಾತ್ರ. ಲಕ್ಷಾಂತರ ನುಸುಳುಕೋರರಿದ್ದಾರೆ ಎಂದವರು ಈಗ ಎಲ್ಲಿದ್ದಾರೆ ಎಂದು ಅವರು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ದಕ್ಷಿಣ ಕನ್ನಡದ ಬಿಜೆಪಿ ನಾಯಕರು ಪ್ರತಿಯೊಂದು ಭಾಷಣದಲ್ಲೂ ಎಸ್ಐಆರ್ ಅಗತ್ಯತೆ ಬಗ್ಗೆ ಮಾತನಾಡಿದ್ದರು. ಆದರೆ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾದ 600-700 ಜನರ ಪಟ್ಟಿಯಲ್ಲಿ ಸಿಕ್ಕಿದ್ದು ಮದುವೆಯಾಗಿ ಬಂದಿರುವ ಬರೀ ಇಬ್ಬರು ಬಾಂಗ್ಲಾ ಹಾಗೂ ಪಾಕಿಸ್ತಾನದ ಮಹಿಳೆಯರು. ಇನ್ನುಳಿದವರು ಸೆಕ್ಯುರಿಟಿ ಗಾರ್ಡ್, ರೆಸ್ಟೋರೆಂಟ್ ಕೆಲಸಕ್ಕೆ ಬಂದ ನೇಪಾಳಿಗಳು ಮತ್ತು ಪಾಠ ಮಾಡಲು ಬಂದ ವಿದೇಶಿ ಪ್ರಜೆಗಳು ಎಂದು ಲೇವಡಿ ಮಾಡಿದರು.
ಐದುವರೆ ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ ನುಸುಳುಕೋರರ ಹೆಸರಿನಲ್ಲಿ ಬ್ರೇನ್ವಾಶ್ ಮಾಡಿ, ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಪೋಲು ಮಾಡಲಾಗಿದೆ. ದೇಶದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಅಂದರೆ ಹತ್ತಿರ ಹತ್ತಿರ 98 ಲಕ್ಷದಿಂದ 1 ಕೋಟಿ ಮತದಾರರ ಹೆಸರುಗಳನ್ನು ಮ್ಯಾಪಿಂಗ್ ನೆಪದಲ್ಲಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. 20-22 ಲಕ್ಷ ಸತ್ತವರು ಮತ್ತು ಡಬಲ್ ಎಂಟ್ರಿಗಳನ್ನು ಹೊರತುಪಡಿಸಿದರೂ, ಇಂದಿಗೂ 70 ಲಕ್ಷಕ್ಕೂ ಅಧಿಕ ಜೀವಂತ ಮತದಾರರು ‘ಆಬ್ಸೆಂಟ್, ಶಿಫ್ಟೆಡ್, ಲಾಜಿಕಲ್ ಡಿಸ್ಕ್ರಿಪೆನ್ಸಿ’ ಹೆಸರಿನಲ್ಲಿ ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ದೂರಿದರು. ಬೆಂಗಳೂರಿನಲ್ಲೇ ಶೇ. 50ರಷ್ಟು ಮತದಾರರನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಆಯೋಗದ ಲೆಕ್ಕಾಚಾರದಂತೆ ನಗರದಲ್ಲಿ ಬರೀ 53 ಲಕ್ಷ ಮತದಾರರಿದ್ದರೆ, ಸರ್ಕಾರ ಹೊಸ ರಸ್ತೆಗಳು ಹಾಗೂ ಹೆಚ್ಚುವರಿ ಬಸ್ಗಳನ್ನು ತರುವ ಅಗತ್ಯವಾದರೂ ಏನಿದೆ ಎಂದು ಪ್ರಶ್ನಿಸಿದರು.