ಮಂಗಳೂರು: ಗುಣಮಟ್ಟದ ತಾಯಿ-ಮಗುವಿನ ಆರೋಗ್ಯ ಸೇವೆ ನೀಡುತ್ತಿರುವ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ರಾಜ್ಯ ಮಟ್ಟದ ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಪಾಸ್ ಫೌಂಡೇಶನ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಲೇಡಿಗೋಷನ್ ಆಸ್ಪತ್ರೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. 2025-26ರ ಆರ್ಥಿಕ ಸಾಲಿನಲ್ಲಿ ಕಾನೂನುಬದ್ಧವಾಗಿ ನಡೆಸಲಾದ ಗರ್ಭಪಾತ ಹಾಗೂ ಗರ್ಭಪಾತೋತ್ತರ ಆರೈಕೆಯಲ್ಲಿ ಶೇ.100 ರಷ್ಟು ತಾಯಂದಿರ ಆರೋಗ್ಯ ಕಾಪಾಡಿ, ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕಿಳಿಸಿರುವುದು ಈ ಪ್ರಶಸ್ತಿಗೆ ಕಾರಣವಾಗಿದೆ.
ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಲೇಡಿಗೋಷನ್ ಆಸ್ಪತ್ರೆಯಲ್ಲಿ ಒಟ್ಟು 304 ಕಾನೂನು ಮಿತಿಯ ಗರ್ಭಪಾತ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಇದರಲ್ಲಿ 9 ವಾರಗಳ ಮೊದಲಿನ 191 ಪ್ರಕರಣಗಳು, 10 ರಿಂದ 12 ವಾರಗಳ 31, 12 ರಿಂದ 20 ವಾರಗಳ 52, 20 ರಿಂದ 24 ವಾರಗಳ 25 ಹಾಗೂ 24 ವಾರಗಳ ನಂತರದ 5 ಪ್ರಕರಣಗಳು ಸೇರಿವೆ. ಈ ಎಲ್ಲಾ ಪ್ರಕರಣಗಳಲ್ಲೂ ಕಾಂಪ್ರೆಹೆನ್ಸಿವ್ ಅಬಾರ್ಶನ್ ಕೇರ್ ಕಾರ್ಯಕ್ರಮದ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿ ಝೀರೋ ಮರಣ ಪ್ರಮಾಣ ದಾಖಲಿಸಲಾಗಿದೆ. ಜೊತೆಗೆ, ಶೇ. 95 ರಷ್ಟು ಫಲಾನುಭವಿಗಳಿಗೆ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿ ಯಶಸ್ವಿಯಾಗಿದೆ.
ಈ ಅಪೂರ್ವ ಸಾಧನೆಯ ಕುರಿತು ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಮಾಹಿತಿ ನೀಡಿ, ಕೆ.ಎಂ.ಸಿ. ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ, ಅರಿವಳಿಕೆ, ರೇಡಿಯೋಡಯಾಗ್ನೋಸಿಸ್ ಹಾಗೂ ನವಜಾತ ಶಿಶು ವಿಭಾಗದ ತಜ್ಞರಿಗೆ, ಶುಶ್ರೂಷಕ ಮತ್ತು ತಾಂತ್ರಿಕ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿಕೊಂಡಿರುವ ವಾಟ್ಸಾಪ್ ಹೈರಿಸ್ಕ್ ಪ್ರೆಗ್ನೆನ್ಸಿ ಟ್ರ್ಯಾಕಿಂಗ್ ಸಿಸ್ಟಮ್, ಪ್ರಸೂತಿ ತೀವ್ರ ನಿಗಾ ಘಟಕ ಹಾಗೂ ಸಿಎಸ್ಆರ್ ಅನುದಾನದಡಿ ಪಡೆದ ಅತ್ಯಾಧುನಿಕ ಉಪಕರಣಗಳು ಈ ಶೂನ್ಯ ತಾಯಿ ಮರಣ ಸಾಧನೆಗೆ ಪ್ರಮುಖ ಪೂರಕವಾಗಿವೆ ಎಂದು ಅವರು ಹೇಳಿದರು.