ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಗರದ ಹೊಟೇಲ್ ಸೀ ವ್ಯೂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾಜಿ ಒಲಂಪಿಕ್ ಕ್ರೀಡಾಪಟು ಹಾಗೂ ಅರ್ಜುನ ಪ್ರಶಸ್ತಿ ವಿಜೇತ ವಂದನಾ ಪೈ ಅವರು ಪ್ರಖ್ಯಾತ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ 24ನೇ ಆವೃತ್ತಿಯ 'ವಂದನಾ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಂದನಾ ಪೈ ಅವರು, ಎಂ.ಆರ್. ಪೂವಮ್ಮ ಅವರ ನಿರಂತರ ಪರಿಶ್ರಮ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿನ ಯಶಸ್ಸು ಯುವ ಕ್ರೀಡಾಪಟುಗಳಿಗೆ ನಿರಂತರ ಸ್ಫೂರ್ತಿಯಾಗಲಿದೆ ಎಂದು ಶ್ಲಾಘಿಸಿ, ಅವರ ಭವಿಷ್ಯದ ಕ್ರೀಡಾ ಜೀವನಕ್ಕೆ ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂವಮ್ಮ ಅವರು, ತಮ್ಮ ಯಶಸ್ಸಿಗೆ ಪೋಷಕರ ಆಶೀರ್ವಾದ, ಬಂಧು-ಮಿತ್ರರ ಬೆಂಬಲ ಹಾಗೂ ಕ್ರೀಡಾಭಿಮಾನಿಗಳ ಪ್ರೋತ್ಸಾಹವೇ ಪ್ರಮುಖ ಕಾರಣ ಎಂದರಲ್ಲದೆ, ಈ ಪ್ರಶಸ್ತಿಯು ತಮ್ಮ ಕ್ರೀಡಾ ಪಯಣದಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದೆ ಎಂದು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ದೇವದಾಸ್ ರೈ ಅವರು ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಭಾಗವಾಗಿ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪೂವಮ್ಮ ಅವರ ಸುದೀರ್ಘ ಕ್ರೀಡಾ ಸಾಧನೆಯನ್ನು ಶ್ಲಾಘಿಸಿದರು. ಗೌರವ ಅತಿಥಿ ಹಾಗೂ ರೋಟರಿ ವಲಯ ಸಹಾಯಕ ಗವರ್ನರ್ ಪ್ರವೀಣ್ ಕುಮಾರ್ ಶರ್ಮಾ ಅವರು ಸಂಸ್ಥೆಯ ಗೃಹವಾರ್ತಾ ಪತ್ರಿಕೆ ‘ಸೆಂಟೋರ್’ ಅನ್ನು ಬಿಡುಗಡೆಗೊಳಿಸಿ, ಪೂವಮ್ಮ ಅವರು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.
ರೋಟರಾಕ್ಟ್ ಮಂಗಳೂರು ಸಿಟಿ ಅಧ್ಯಕ್ಷ ರಕ್ಷಣ್ ಟಿ.ಆರ್. ಪ್ರಶಸ್ತಿ ವಿಜೇತರ ಪರಿಚಯ ನೀಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ರವೀಂದ್ರ ಸ್ವಾಗತಿಸಿ, ಕಾರ್ಯದರ್ಶಿ ಜಾಕ್ಸನ್ ಸಲ್ದಾನಾ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಮಹೇಶ್ ಮತ್ತು ಶ್ರೀಕಾಂತ್ ಅವರನ್ನು ನೂತನ ಸದಸ್ಯರಾಗಿ ಸಂಸ್ಥೆಗೆ ಸೇರ್ಪಡೆಗೊಳಿಸಲಾಯಿತು. ವೇದಿಕೆಯಲ್ಲಿ ವಲಯ ಪ್ರತಿನಿಧಿ ರಾಜೇಶ್ ಶೆಟ್ಟಿ ಮತ್ತು ಸಂಸ್ಥೆಯ ಮಾಜಿ ಅಧ್ಯಕ್ಷ ಭಾಸ್ಕರ್ ರೈ ಉಪಸ್ಥಿತರಿದ್ದರು. ಡೆರಿಕ್ ಸ್ಟೀವನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ರೋಟರಾಕ್ಟ್ ಕಾರ್ಯದರ್ಶಿ ಮುಕೇಶ್ ಧನ್ಯವಾದ ಸಮರ್ಪಿಸಿದರು.