ಮಂಗಳೂರು : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಕಾರು ಚಾಲಕರಿಂದ ಪ್ರಯಾಣಿಕರನ್ನು ಬಿಡಲು ಅಥವಾ ಕರೆದುಕೊಂಡು ಹೋಗಲು ಪ್ರವೇಶಿಸುವ ಸಂದರ್ಭದಲ್ಲಿ ವಸೂಲಿ ಮಾಡುತ್ತಿರುವ ರೂ. 50 ಪ್ರವೇಶ ಶುಲ್ಕ ಹಾಗೂ 30 ನಿಮಿಷಗಳ ಬಳಿಕ ವಿಧಿಸುತ್ತಿರುವ ರೂ. 300 ದಂಡವನ್ನು ತಕ್ಷಣವೇ ಹಿಂಪಡೆಯುವಂತೆ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿʼಸೋಜಾ ಅವರು ಒತ್ತಾಯಿಸಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ವಾಹನಗಳಿಗೆ ಇಲ್ಲದ ಈ ಶುಲ್ಕವನ್ನು ಕೇವಲ ಪ್ರವಾಸಿ ಕಾರುಗಳಿಂದ ಮಾತ್ರ ವಸೂಲಿ ಮಾಡುವುದು ತಾರತಮ್ಯ ಹಾಗೂ ಚಾಲಕರ ಜೇಬಿಗೆ ಕತ್ತರಿ ಹಾಕುವ ಅಸಮಂಜಸ ಕ್ರಮವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂತಹ ವ್ಯವಸ್ಥೆ ಇಲ್ಲದಿರುವುದನ್ನು ಅವರು ಈ ವೇಳೆ ಪ್ರಸ್ತಾಪಿಸಿದರು.
ಸಭೆಯಲ್ಲಿ ಪ್ರತಿಕ್ರಿಯಿಸಿದ ಅದಾನಿ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಅಳ್ವ ಅವರು, ಈ ಸಮಸ್ಯೆಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಬಿನ್ನು ವರ್ಗೀಸ್ ಅವರು ಚಾಲಕರು ಆಡಳಿತದೊಂದಿಗೆ ಸಹಕರಿಸಿದಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು. ಅಲ್ಲದೆ, ವಾಹನ ದಟ್ಟಣೆಯಿಂದಾಗಿ 30 ನಿಮಿಷಗಳಿಗಿಂತ ಹೆಚ್ಚು ಸಮಯವಾದಾಗ ರೂ. 300 ಶುಲ್ಕ ವಿಧಿಸುತ್ತಿರುವ ನಿಯಮವನ್ನು ಮರುಪರಿಶೀಲಿಸಿ ರದ್ದುಗೊಳಿಸಬೇಕೆಂದು ಚಾಲಕರು ಆಗ್ರಹಿಸಿದ ಹಿನ್ನೆಲೆಯಲ್ಲಿ, ಮಾನವ ಸಂಪನ್ಮೂಲ ವಿಭಾಗದ (HR) ರವಿ ಅವರು ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಮಂಗಳೂರು ಟೂರಿಸ್ಟ್ ಡ್ರೈವರ್ಸ್ ಅಸೋಸಿಯೇಷನ್ನ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.