ಮಂಗಳೂರು: ಅಂಚೆ ಇಲಾಖೆಯಿಂದ ಹೊಸದಾಗಿ ಹಲವು ಜನಪ್ರಿಯ ಹಾಗೂ ಉಪಯುಕ್ತ ಸೇವಾ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಿದ್ದು, ಸಾರ್ವಜನಿಕರು ಹಾಗೂ ಗ್ರಾಹಕರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದು ಭಾರತೀಯ ಅಂಚೆ ಇಲಾಖೆಯ ಪಾಂಡೇಶ್ವರ ಕೇಂದ್ರದ ಹಿರಿಯ ಅಧಿಕಾರಿ ಲೋಕನಾಥ್ ಕರೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್, ಪತ್ರಿಕಾಭವನ ಟ್ರಸ್ಟ್ ಹಾಗೂ ಭಾರತೀಯ ಅಂಚೆ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಅಂಚೆ ವಿಮಾ ಯೋಜನೆಯ ನೋಂದಣಿ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ಅಂಚೆ ಇಲಾಖೆಯು ಕೇವಲ ಅಂಚೆ ರವಾನೆಗೆಷ್ಟೇ ಸೀಮಿತವಾಗಿರದೆ, ಆಧಾರ್ ನೋಂದಣಿ, ಆಧಾರ್ ವಿವರಗಳ ತಿದ್ದುಪಡಿ, ವಿವಿಧ ಮಾದರಿಯ ಅಪಘಾತ ಮತ್ತು ಆರೋಗ್ಯ ವಿಮಾ ಯೋಜನೆಗಳನ್ನು ಯಶಸ್ವಿಯಾಗಿ ತಲುಪಿಸುತ್ತಿದೆ ಎಂದು ವಿವರಣೆ ನೀಡಿದರು. ಅತ್ಯಂತ ಕಡಿಮೆ ಮೊತ್ತದ ಕಂತಿನಲ್ಲಿ ಕನಿಷ್ಠ ದಾಖಲೆಗಳನ್ನು ನೀಡಿ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು ಅಂಚೆ ಯೋಜನೆಗಳಲ್ಲಿ ಅವಕಾಶವಿದೆ. ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ 10 ಲಕ್ಷ ರೂಪಾಯಿ ವರೆಗಿನ ಅಪಘಾತ ವಿಮಾ ಯೋಜನೆಯು ಅತ್ಯಂತ ಉಪಯುಕ್ತವಾದ ಭದ್ರತೆಯನ್ನು ನೀಡಲಿದೆ ಎಂದು ಅವರು ಮಾಹಿತಿ ಹಂಚಿಕೊಂಡರು.
ಈ ಚಾಲನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ವಹಿಸಿದ್ದರು. ವೇದಿಕೆಯಲ್ಲಿ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಜಿಲ್ಲಾ ಸಂಘದ ಪೂರ್ವಾಧ್ಯಕ್ಷ ಹರ್ಷ ಹಾಗೂ ಭಾರತೀಯ ಅಂಚೆ ಇಲಾಖೆಯ ಪಾಂಡೇಶ್ವರ ಕೇಂದ್ರದ ನಿರೀಕ್ಷಕ ಪ್ರದೀಪ್ ಭಂಡಾರಿ ಉಪಸ್ಥಿತರಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಧನ್ಯವಾದ ಸಮರ್ಪಿಸಿದರು.