image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ನವೆಂಬರ್ 8ರಂದು 12ನೇ ವರ್ಷದ ಭಾವೈಕ್ಯತೆಯ ದೀಪಾವಳಿ ಸಂಭ್ರಮಾಚರಣೆ

ಮಂಗಳೂರಿನಲ್ಲಿ ನವೆಂಬರ್ 8ರಂದು 12ನೇ ವರ್ಷದ ಭಾವೈಕ್ಯತೆಯ ದೀಪಾವಳಿ ಸಂಭ್ರಮಾಚರಣೆ

ಮಂಗಳೂರು:  ಕದ್ರಿ ಪಾರ್ಕ್ ಬಳಿಯ ಶ್ರೀ ಗೋರಕ್ಷನಾಥ ಜ್ಞಾನ ಮಂದಿರ ಸಭಾಂಗಣದಲ್ಲಿ 2026ರ ನವೆಂಬರ್ 08ರ ಆದಿತ್ಯವಾರದಂದು ಮಧ್ಯಾಹ್ನ 1:30ರಿಂದ ರಾತ್ರಿ 9:00ರವರೆಗೆ 12ನೇ ವರ್ಷದ ಭಾವೈಕ್ಯತೆಯ ದೀಪಾವಳಿ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿದೆ ಎಂದು ಸಂಚಾಲಕರಾದ ಜಿ. ನಾಗೇಂದ್ರ ಕುಮಾರ್ ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಕಳೆದ 11 ವರ್ಷಗಳಿಂದ ಮಂಗಳೂರಿನ ವಿವಿಧೆಡೆ ಸರ್ವಧರ್ಮಗಳ ಭಾವೈಕ್ಯತೆಯ ಸಂಕೇತವಾಗಿ ದೀಪಾವಳಿ, ಕ್ರಿಸ್ಮಸ್ ಹಾಗೂ ರಂಜಾನ್ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಈ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶಾಲಾ ವಿದ್ಯಾರ್ಥಿಗಳಿಗೆ ಸಂಜೆ 3:00ರಿಂದ 1ನೇ ತರಗತಿಯಿಂದ ಪಿ.ಯು.ಸಿ. ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ 3:30ರಿಂದ 12 ನಿಮಿಷಗಳ ಕಾಲಾವಕಾಶದೊಂದಿಗೆ ಮುಕ್ತ ಭರತನಾಟ್ಯ ಸ್ಪರ್ಧೆ ಹಾಗೂ ಗೂಡುದೀಪ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಭರತನಾಟ್ಯ ಸ್ಪರ್ಧೆಯ ವಿಜೇತರಿಗೆ ಪ್ರಥಮ ರೂ. 25,000/-, ದ್ವಿತೀಯ ರೂ. 20,000/- ಹಾಗೂ ತೃತೀಯ ರೂ. 15,000/- ನಗದು ಬಹುಮಾನದೊಂದಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಲು 05-11-2026 ಕೊನೆಯ ದಿನಾಂಕವಾಗಿದೆ.

ಸಂಜೆ 3:00 ಗಂಟೆಗೆ ನಡೆಯಲಿರುವ ಸರ್ವಧರ್ಮ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮೂಡುಬಿದಿರೆ ಕೇಮಾರು ಮಠದ ಶ್ರೀ ಶ್ರೀ ಈಶ ವಿಠಲ ಸ್ವಾಮೀಜಿಯವರು ಉದ್ಘಾಟಿಸಿ ದೀಪಾವಳಿ ಸಂದೇಶ ನೀಡಲಿದ್ದಾರೆ. ಶಾಸಕ ಶ್ರೀ ಐವನ್ ಡಿ’ಸೋಜಾ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಾತಿಥಿಗಳಾಗಿ ಧರ್ಮಗುರು ವಂ| ರೆ| ಫಾ| ರಿಚರ್ಡ್ ಕುವೆಲ್ಲೊ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್. ಹಸನಬ್ಬ ಚಾರ್ಮಾಡಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದೆ ಕು| ಅರ್ಷಿಯಾ ಖಾನ್ ಅವರನ್ನು ಸನ್ಮಾನಿಸಲಾಗುವುದು ಎಂದರು.

ಸ್ಪರ್ಧೆಗಳನ್ನು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ (ಐ.ಎ.ಎಸ್.), ಕರ್ನಾಟಕ ಗೇರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಮಮತಾ ಡಿ.ಎಸ್. ಗಟ್ಟಿ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕು| ಪ್ರಗತಿ ಬೀಕಲ್, ಎನ್.ಪಿ. ಮುನುರಾಜ್, ಮನೀಷ್ ಬೋಳಾರ್, ಅಮೃತ್ ಕದ್ರಿ, ಜೇಮ್ಸ್ ಪ್ರವೀಣ್, ಅಶ್ರಫ್ ಬೆಂಗ್ರೆ ಹಾಗೂ ಹರ್ಬಟ್ ಡಿ’ಸೋಜಾ ಕಡೇತಾರ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ