ಮಂಗಳೂರು: ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳ ಅನಿಲ ವ್ಯವಸ್ಥೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪ್ರಸಿದ್ಧ ಪುಣೆ ಗ್ಯಾಸ್ ಸಂಸ್ಥೆಯು ಮಂಗಳೂರಿನಲ್ಲಿ ತನ್ನ ನೂತನ 'ಪುಣೆ ಗ್ಯಾಸ್ ಎಕ್ಸ್ಪೀರಿಯನ್ಸ್ ಸೆಂಟರ್' (Pune Gas Experience Center) ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಇದು ಸಂಸ್ಥೆಯ ದೇಶದ 10ನೇ ಅನುಭವ ಕೇಂದ್ರವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ತೆರೆಯಲಾದ 2ನೇ ಕೇಂದ್ರವಾಗಿದೆ. ಸಂಸ್ಥೆಯು ಈಗಾಗಲೇ ಬೆಂಗಳೂರಿನಲ್ಲಿ ತನ್ನ ಪ್ರಥಮ ಎಕ್ಸ್ಪೀರಿಯನ್ಸ್ ಸೆಂಟರ್ ಹೊಂದಿದ್ದು, ಇದೀಗ ಮಂಗಳೂರಿನ ಉರ್ವ ಮಾರಿಗುಡಿ ಸಮೀಪದ ಲೋಟಸ್ ಅಥರ್ವ ವಾಣಿಜ್ಯ ಸಂಕೀರ್ಣದಲ್ಲಿರುವ 'ವಿಂದ್ಯಾ ಅಪ್ಲಯನ್ಸ್'ನಲ್ಲಿ ಹೊಸ ಕೇಂದ್ರವು ಕಾರ್ಯಾಚರಣೆ ಆರಂಭಿಸಿದೆ.
ಅಡುಗೆ ಅನಿಲದ ವಾಣಿಜ್ಯಾತ್ಮಕ ಮತ್ತು ಕೈಗಾರಿಕಾ ಬಳಕೆಯಲ್ಲಿ ಅತ್ಯುನ್ನತ ಕ್ಷಮತೆ, ಸುರಕ್ಷತೆ ಹಾಗೂ ನಿಖರ ಎಂಜಿನಿಯರಿಂಗ್ ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಪುಣೆ ಗ್ಯಾಸ್ ತನ್ನ ಜಾಲವನ್ನು ಕರಾವಳಿ ಪ್ರದೇಶಕ್ಕೆ ವಿಸ್ತರಿಸಿದೆ. ಮಂಗಳೂರಿನ ನೂತನ ಕೇಂದ್ರವನ್ನು ಪುಣೆ ಗ್ಯಾಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಸಿಇಒ ಜೇಸಲ್ ಸಂಪತ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಕ್ಸ್ಪೀರಿಯನ್ಸ್ ಸೆಂಟರ್ ಮತ್ತು ಫ್ರಾಂಚೈಸಿಯಾಗಿರುವ ವಿಂದ್ಯಾ ಅಪ್ಲಯನ್ಸಸ್ನ ನಿತ್ಯಾನಂದ ಪೈ ಹಾಗೂ ಮಂಗಳೂರಿನ ಹೋಟೆಲ್ ಮತ್ತು ಆತಿಥ್ಯ ಉದ್ಯಮದ ಪ್ರಮುಖ ಗಣ್ಯರು ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜೇಸಲ್ ಸಂಪತ್ ಅವರು, "ಉದ್ಯಮಗಳಲ್ಲಿ ಅನಿಲ ಬಳಕೆಯ ಕ್ಷಮತೆಯನ್ನು ಹೆಚ್ಚಿಸುವುದರಿಂದ ಕಂಪೆನಿಗಳ ಕಾರ್ಯಾಚರಣೆಯ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದು. ಮಂಗಳೂರು ಹಾಗೂ ಕರ್ನಾಟಕ ರಾಜ್ಯವು ಅನಿಲ ಆಧಾರಿತ ಉದ್ಯಮಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತ ಬಂದಿದೆ. ಪುಣೆ ಗ್ಯಾಸ್ನ ಸುಧಾರಿತ ಎಂಜಿನಿಯರಿಂಗ್ ಪರಿಹಾರಗಳು ದೇಶಾದ್ಯಂತ ಉದ್ಯಮಗಳಿಗೆ ವಾರ್ಷಿಕವಾಗಿ 1,400 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಆರ್ಥಿಕ ಉಳಿತಾಯ ತಂದುಕೊಟ್ಟಿವೆ. ಮಂಗಳೂರಿನಲ್ಲಿ ಪುಣೆ ಗ್ಯಾಸ್ ಈಗಾಗಲೇ ಹಲವು ಮುಂಚೂಣಿಯ ಸಂಸ್ಥೆಗಳಿಗೆ ತಾಂತ್ರಿಕ ನೆರವು ನೀಡುತ್ತಿದ್ದು, ನೂತನ ಎಕ್ಸ್ಪೀರಿಯನ್ಸ್ ಸೆಂಟರ್ ಮೂಲಕ ತನ್ನ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲಿದೆ" ಎಂದು ಆಶಯ ವ್ಯಕ್ತಪಡಿಸಿದರು.
ಪುಣೆ ಗ್ಯಾಸ್ನ ಮಂಗಳೂರು ಫ್ರಾಂಚೈಸಿ ಪಾಲುದಾರರಾದ ವಿಂದ್ಯಾ ಅಪ್ಲಯನ್ಸಸ್ನ ನಿತ್ಯಾನಂದ ಪೈ ಮಾತನಾಡಿ, "ಕರ್ನಾಟಕದಲ್ಲಿ ಪ್ರಸ್ತುತ ಸರಾಸರಿ ಪ್ರತಿದಿನ ಸುಮಾರು 850 ಮೆಟ್ರಿಕ್ ಟನ್ ಎಲ್ಪಿಜಿಗೆ ಬೇಡಿಕೆಯಿದೆ. ಇದು ಸುಮಾರು 44,000 ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳಿಗೆ ಸಮಾನವಾಗಿದೆ. ಈ ದತ್ತಾಂಶವು ಅನಿಲ ವಿತರಣೆ, ಸುರಕ್ಷತೆ ಮತ್ತು ಕ್ಷಮತೆಯ ಕ್ಷೇತ್ರದಲ್ಲಿ ಉದ್ಯಮಗಳಿಗೆ ಇರುವ ವಿಪುಲ ಅವಕಾಶಗಳನ್ನು ಎತ್ತಿಹಿಡಿಯುತ್ತದೆ. ಪುಣೆ ಗ್ಯಾಸ್ನ ತಾಂತ್ರಿಕ ವ್ಯವಸ್ಥೆಗಳು ಎಲ್ಪಿಜಿ ಬಳಕೆಯ ಮಿತಿಯನ್ನು ಹೆಚ್ಚಿಸುವುದರ ಜೊತೆಗೆ ಅನಿಲ ಪೋಲಾಗುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ" ಎಂದರು.
ಮಂಗಳೂರಿನ ಈ ನೂತನ ಎಕ್ಸ್ಪೀರಿಯನ್ಸ್ ಸೆಂಟರ್ನಲ್ಲಿ ಪುಣೆ ಗ್ಯಾಸ್ ಸಂಸ್ಥೆಯ ಡ್ರೈ ಟೈಪ್ ಎಲ್ಪಿಜಿ ವೆಪೊರೈಸರ್ (Dry Type LPG Vaporizer), ಎಲ್ಪಿ ಜೀನಿಯಸ್ ಸ್ಮಾರ್ಟ್ ಎಲ್ಪಿಜಿ ಸಿಸ್ಟಮ್ (LPGenius Smart LPG System), ಫುಯೆಲ್ಫ್ಯೂಷನ್ (FuelFusion), ಲೀಕ್ ಚೆಕ್ ಮತ್ತು ಹ್ಯಾಂಡ್ಹೆಲ್ಡ್ ಸ್ನಿಫರ್ (LeakCheck & Handheld Sniffer) ಹಾಗೂ ಗ್ಯಾಸ್ಟ್ರೈನ್ ಪ್ರೆಷರ್ ರೆಗ್ಯುಲೇಷನ್ ಸಿಸ್ಟಮ್ಗಳಂತಹ ಸುಧಾರಿತ ಉಪಕರಣಗಳನ್ನು ಪ್ರದರ್ಶನಕ್ಕಿಡಲಾಗಿದೆ. ಗ್ರಾಹಕರು ಹಾಗೂ ಉದ್ಯಮಿಗಳು ನೇರವಾಗಿ ಈ ಕೇಂದ್ರಕ್ಕೆ ಭೇಟಿ ನೀಡಿ ಈ ಸಾಧನಗಳ ಕಾರ್ಯಾಚರಣೆ ಮತ್ತು ಸುರಕ್ಷತಾ ವಿಧಾನಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ತಿಳಿದುಕೊಳ್ಳಬಹುದಾಗಿದೆ.