ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ 60ನೇ ವರ್ಷಾಚರಣೆಯ ಸಮಾರೋಪ ಹಾಗೂ ಮೂರನೇ ದಿನದ ವಾರ್ಷಿಕೋತ್ಸವವಾದ 'ಷಷ್ಟಬ್ದ ಸಮರ್ಪಣಂ' ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಪ್ರಧಾನ ವಕ್ತಾರರಾಗಿ ಭಾಗವಹಿಸಿ ಮಾತನಾಡಿದ ಆರ್ಎಸ್ಎಸ್ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಹಾಗೂ ಉದ್ಯಮಿ ಸೂರಜ್ ಕುಮಾರ್, ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವುದಕ್ಕೆ ಸೀಮಿತವಾಗದೆ ಜ್ಞಾನ, ಶಿಸ್ತು, ಮಾನವೀಯ ಮೌಲ್ಯಗಳು ಹಾಗೂ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಶಿಕ್ಷಣದ ನಿಜವಾದ ಉದ್ದೇಶ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯದೊಂದಿಗೆ ದೈಹಿಕ ಸಾಮರ್ಥ್ಯ, ಸೃಜನಶೀಲತೆ ಮತ್ತು ಜೀವನ ಕೌಶಲಗಳನ್ನು ವೃದ್ಧಿಸುವುದಾಗಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ಹ್ಯಾಂಡ್ ಆಂಡ್ ಮೈಕ್ರೋವಾಸ್ಯುಲರ್ ಸರ್ಜನ್ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ಶ್ರುತಿಕಾಂತ್ ಎಸ್. ಮಾತನಾಡಿ, ಸೋಲು ನಮ್ಮ ಪ್ರಯತ್ನದ ಅಂತ್ಯವಲ್ಲ, ಬದಲಿಗೆ ತಪ್ಪುಗಳಿಂದ ಪಾಠ ಕಲಿತು ಮತ್ತೆ ಪ್ರಯತ್ನಿಸಿದಾಗ ಯಶಸ್ಸು ಖಂಡಿತ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ ಎಂ. ವಾರ್ಷಿಕ ವರದಿ ಮಂಡಿಸಿದರು. ಈ ಸಮಾರಂಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಬಹುಮಾನಗಳು ಹಾಗೂ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ಅಲ್ಲದೆ, ಷಷ್ಟ್ಯಬ್ದ ಹೆಗ್ಗುರುತಿನ ಲಾಂಚ್ಛನಕ್ಕೆ ಗೌರವ ಸಮರ್ಪಣೆ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.