image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೌಜನ್ಯ ಮಹಿಳಾ ಮಂಡಲದಲ್ಲಿ ‘ರಾಮಾಯಣ-ಮಹಾಭಾರತದ ಜೀವನ ಮೌಲ್ಯಗಳು’ ಚಿಂತನ ಕಾರ್ಯಕ್ರಮ

ಸೌಜನ್ಯ ಮಹಿಳಾ ಮಂಡಲದಲ್ಲಿ ‘ರಾಮಾಯಣ-ಮಹಾಭಾರತದ ಜೀವನ ಮೌಲ್ಯಗಳು’ ಚಿಂತನ ಕಾರ್ಯಕ್ರಮ

ಮಂಗಳೂರು: ಉರ್ವದ ಹೊಯ್ಗೆಬೈಲ್‌ನಲ್ಲಿರುವ ಸೌಜನ್ಯ ಮಹಿಳಾ ಮಂಡಲದಲ್ಲಿ ದಿನಾಂಕ 28-10-2026ರಂದು ಮಹಿಳೆಯರಲ್ಲಿ ಆಧ್ಯಾತ್ಮಿಕ ಚಿಂತನೆಯಿಂದ ದೊರೆಯುವ ಆತ್ಮಾನಂದದ ಅರಿವನ್ನು ಉಂಟುಮಾಡುವ ಉದ್ದೇಶದಿಂದ ‘ರಾಮಾಯಣ ಮಹಾಭಾರತದ ಜೀವನ ಮೌಲ್ಯಗಳು’ ಕುರಿತು ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಕಳಕಳಿಯ ಆಧ್ಯಾತ್ಮಿಕ ಚಿಂತಕಿ ಶ್ರೀಮತಿ ಚೇತನಾ ಶ್ರೀಕೃಷ್ಣ ಭಟ್, "ರಾಮಾಯಣ ಮತ್ತು ಮಹಾಭಾರತದಲ್ಲಿ ತಿಳಿಸಿರುವ ಜೀವನ ಮೌಲ್ಯಗಳು ಸಾರ್ವಕಾಲಿಕ ಸತ್ಯವಾಗಿವೆ. ಧರ್ಮ, ಭಕ್ತಿ, ಪ್ರೀತಿ ಹಾಗೂ ವಿಶ್ವಾಸದ ಮಹತ್ವವನ್ನು ನಮ್ಮ ಧರ್ಮ ಗ್ರಂಥಗಳು ನಮಗೆ ಸ್ಪಷ್ಟವಾಗಿ ತಿಳಿಸಿಕೊಡುತ್ತವೆ. ಇವುಗಳನ್ನು ಓದಿ, ಅರ್ಥೈಸಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ" ಎಂದು ಕರೆ ನೀಡಿದರು.

ಸದಸ್ಯೆಯರು ತದೇಕಚಿತ್ತರಾಗಿ ವಿಚಾರಗಳನ್ನು ಆಲಿಸಿ, ಪ್ರಶ್ನೋತ್ತರಗಳ ಮೂಲಕ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು. ಇದೇ ಸಂದರ್ಭದಲ್ಲಿ ಶ್ರೀಮತಿ ಚೇತನಾ ಶ್ರೀಕೃಷ್ಣ ಭಟ್ ಅವರನ್ನು ಸೌಜನ್ಯ ಮಹಿಳಾ ಮಂಡಲದ ವತಿಯಿಂದ ಗೌರವಿಸಲಾಯಿತು.

ಮಂಡಲದ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಅಧ್ಯಕ್ಷೆ ರಮಾ ಎನ್. ಅಧ್ಯಕ್ಷೀಯ ನುಡಿಗಳನ್ನಾಡಿದರು. ಸದಸ್ಯೆ ಶೀಲಾ ಶೆಟ್ಟಿ ಧನ್ಯವಾದ ಸಮರ್ಪಿಸಿದರೆ, ಕಾರ್ಯದರ್ಶಿ ರಾಜೇಶ್ವರಿ ಎಸ್. ರಾವ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ