ಮಂಗಳೂರು: ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಅಭಾವ ಎದುರಾಗದಂತೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ನೀರು ಅಥವಾ ಜಾನುವಾರುಗಳಿಗೆ ಮೇವು ಸರಬರಾಜಿನಲ್ಲಿ ವ್ಯತ್ಯಯವಾದರೆ ವಿಳಂಬ ಮಾಡದೆ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದರು. ನೀರಿನ ಪೂರೈಕೆಗಾಗಿ ಮುಂಚಿತವಾಗಿಯೇ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಬೇಡಿಕೆ ಬಂದ ತಕ್ಷಣವೇ ಸರಬರಾಜು ಮಾಡುವಂತೆ ವ್ಯವಸ್ಥೆ ರೂಪಿಸಬೇಕು ಎಂದು ತಿಳಿಸಿದರು.
ಅಂಗನವಾಡಿ ಮತ್ತು ಶಾಲಾ ಕಟ್ಟಡಗಳ ಸುರಕ್ಷತೆಗೆ ಆದ್ಯತೆ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಅಗತ್ಯವಿರುವ ದುರಸ್ತಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲೂಕು ಮಟ್ಟದಲ್ಲಿ ಪ್ರತಿ 15 ದಿನಕ್ಕೊಮ್ಮೆ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳನ್ನು ಕಡ್ಡಾಯವಾಗಿ ನಡೆಸಿ, ಕುಡಿಯುವ ನೀರು, ಮೇವಿನ ಲಭ್ಯತೆ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಸಭೆಯಲ್ಲಿ ಬರ ನಿರ್ವಹಣೆ, ಮುಂಗಾರು ಮಳೆಯಿಂದಾದ ಹಾನಿ ಹಾಗೂ ಎಂ.ಆರ್.ಪಿ.ಎಲ್ ಅವಘಡದಿಂದ ಉಂಟಾದ ಆಸ್ತಿ-ಪಾಸ್ತಿ ಹಾನಿಯ ಕುರಿತು ಚರ್ಚಿಸಲಾಯಿತು. ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ., ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.