image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕ್ರೀಡೆ ಬದುಕಿನ ಪಾಠ ಕಲಿಸುತ್ತದೆ: ಕರ್ನಲ್ ಶರತ್ ಭಂಡಾರಿ

ಕ್ರೀಡೆ ಬದುಕಿನ ಪಾಠ ಕಲಿಸುತ್ತದೆ: ಕರ್ನಲ್ ಶರತ್ ಭಂಡಾರಿ

ಮಂಗಳೂರು: ಜೀವನದಲ್ಲಿ ಗೆಲುವಿನಷ್ಟೇ ಸೋಲನ್ನು ಸ್ವೀಕರಿಸಿ, ಧೈರ್ಯದಿಂದ ಮತ್ತೆ ಎದ್ದು ಮುನ್ನಡೆಯುವ ಮನೋಭಾವ ಪ್ರಮುಖವಾದುದು. ಕ್ರೀಡೆಯು ನಮಗೆ ಕೇವಲ ಆಟವಲ್ಲ, ಸವಾಲುಗಳನ್ನು ಎದುರಿಸುವ ಜೀವನಪಾಠವನ್ನು ಕಲಿಸುತ್ತದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು.

ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೀಳುವುದು ಮತ್ತು ಬಿದ್ದ ಮೇಲೆ ಮತ್ತೆ ಎದ್ದು ಓಡುವುದನ್ನು ಕ್ರೀಡೆ ಅಭ್ಯಾಸ ಮಾಡಿಸುತ್ತದೆ; ಶಿಸ್ತು, ಸಮಯಪಾಲನೆ ಹಾಗೂ ಸೋಲಿನ ನಿರಾಸೆಯಿಂದ ಬೇಗನೆ ಚೇತರಿಸಿಕೊಳ್ಳುವ ಅನೇಕ ಮೌಲ್ಯಗಳನ್ನು ಕ್ರೀಡಾ ಚಟುವಟಿಕೆಗಳು ಬೆಳೆಸುತ್ತವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮತೋಲನ ಕಾಯ್ದುಕೊಳ್ಳುವ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಮಾತನಾಡಿ, ಸೋಲೇ ಗೆಲುವಿನ ಸೋಪಾನವಾಗಿದ್ದು, ಪ್ರತಿ ಹಿನ್ನಡೆಯೂ ಯಶಸ್ಸಿನತ್ತ ಕೊಂಡೊಯ್ಯುವ ಮೆಟ್ಟಿಲಾಗಬಹುದು. ಕ್ರೀಡಾಪಟುಗಳು ಗೆಲುವೊಂದನ್ನೇ ಗಮನದಲ್ಲಿಟ್ಟುಕೊಳ್ಳದೆ, ಉದಾತ್ತ ಕ್ರೀಡಾ ಮನೋಭಾವದಿಂದ ಮೈದಾನದಲ್ಲಿ ಪ್ರತಿ ಕ್ಷಣವನ್ನು ಆನಂದಿಸಬೇಕು ಎಂದು ಸಲಹೆ ನೀಡಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮದಾಸ ಗೌಡ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅತ್ಯಂತ ಅಗತ್ಯವಾಗಿದ್ದು, ಕ್ರೀಡಾಪಟುಗಳು ನಾಯಕತ್ವ ಗುಣ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಿ. ಶ್ರೀನಿವಾಸ್ ನಾಯಕ್, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎವರೆಸ್ಟ್ ರೋಡ್ರಿಗಸ್, ವಿಶ್ವವಿದ್ಯಾನಿಲಯ ಕಾಲೇಜಿನ ದೈಹಿಕ ಶಿಕ್ಷಣ ಉಪನಿರ್ದೇಶಕ ಡಾ. ಹರಿದಾಸ್ ಕುಳೂರು, ಸಂಘಟನಾ ಜಂಟಿ ಕಾರ್ಯದರ್ಶಿ ಡಾ. ಸೌಮ್ಯ ಟಿ. ಎನ್. ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ