image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್: 74 ಪದಕ, 15 ಕೂಟ ದಾಖಲೆಯೊಂದಿಗೆ ಆಳ್ವಾಸ್ ಶಾಲೆಗೆ ಪ್ರಶಸ್ತಿಯ ಗರಿ

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್: 74 ಪದಕ, 15 ಕೂಟ ದಾಖಲೆಯೊಂದಿಗೆ ಆಳ್ವಾಸ್ ಶಾಲೆಗೆ ಪ್ರಶಸ್ತಿಯ ಗರಿ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಹಾಗೂ ತುಂಬೆ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ 14 ಮತ್ತು 17 ವರ್ಷ ವಯೋಮಿತಿ ಒಳಗಿನ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ್ದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಒಟ್ಟು 35 ಚಿನ್ನ, 31 ಬೆಳ್ಳಿ ಹಾಗೂ 8 ಕಂಚಿನ ಪದಕಗಳೊಂದಿಗೆ 74 ಪದಕಗಳನ್ನು ಬಾಚಿಕೊಂಡಿರುವ ಆಳ್ವಾಸ್, 15 ನೂತನ ಕೂಟ ದಾಖಲೆಗಳನ್ನು ಬರೆದು ಸಮಗ್ರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಆಳ್ವಾಸ್ ಶಾಲೆಯ ಕ್ರೀಡಾಪಟುಗಳಾದ ಆದಿತ್ಯ (1500ಮೀ, 800ಮೀ, 4x400ಮೀ ರಿಲೇ), ಸುಭಾಷ್ (110ಮೀ ಹರ್ಡಲ್ಸ್, 4x400ಮೀ ರಿಲೇ), ಅಮನ್ (4x400ಮೀ ರಿಲೇ), ತುಷಾರ್ (4x400ಮೀ ರಿಲೇ), ಮೇಘಾ (400ಮೀ, 4x400ಮೀ ರಿಲೇ), ಸಮೀಕ್ಷಾ (400ಮೀ ಹರ್ಡಲ್ಸ್, 4x400ಮೀ ರಿಲೇ), ಪೂರ್ವಿ (ಹ್ಯಾಮರ್ ಎಸೆತ), ಅನುಶ್ರೀ ಪಿ. ಎಸ್. (4x400ಮೀ ರಿಲೇ), ಸುಜಾತ (4x400ಮೀ ರಿಲೇ) ಮತ್ತು ಮೋಕ್ಷಿತ್ (80ಮೀ ಹರ್ಡಲ್ಸ್) ನೂತನ ಕೂಟ ದಾಖಲೆ ನಿರ್ಮಿಸಿದ ಪ್ರಮುಖರಾಗಿದ್ದಾರೆ. ಈ ಅದ್ಭುತ ಸಾಧನೆಯ ಬಲದಿಂದ ಆಳ್ವಾಸ್ ಶಾಲೆ 14 ವರ್ಷ ವಯೋಮಿತಿಯ ಬಾಲಕರ ವಿಭಾಗ ಹಾಗೂ 17 ವರ್ಷ ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳೆರಡರಲ್ಲೂ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

14 ವರ್ಷ ವಯೋಮಿತಿ ವಿಭಾಗದ ಬಾಲಕ-ಬಾಲಕಿಯರ ಸ್ಪರ್ಧೆಗಳಲ್ಲಿ ಮೋಕ್ಷಿತ್ 80ಮೀ ಹರ್ಡಲ್ಸ್‌ನಲ್ಲಿ ಪ್ರಥಮ ಹಾಗೂ 100ಮೀ ಮತ್ತು 4x100ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದರೆ, ಮಂಥನ್ 400ಮೀ ಹಾಗೂ 600ಮೀ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು 4x100ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದರು. ಪೌಡೇಶ್ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ನಿಖಿಲ್ ಮತ್ತು ಮಲ್ಲಿಕಾರ್ಜುನ್ 4x100ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದರು. ಅಭಿಜ್ಞಾ 80ಮೀ ಹರ್ಡಲ್ಸ್‌ನಲ್ಲಿ ಪ್ರಥಮ, ಎತ್ತರ ಜಿಗಿತ ಮತ್ತು 4x100ಮೀ ರಿಲೇಯಲ್ಲಿ ದ್ವಿತೀಯ ಹಾಗೂ 100ಮೀ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದರು. ತನ್ಮಯ ಎತ್ತರ ಜಿಗಿತದಲ್ಲಿ ತೃತೀಯ ಹಾಗೂ 4x100ಮೀ ರಿಲೇಯಲ್ಲಿ ದ್ವಿತೀಯ, ಮೀನಾಕ್ಷಿ 400ಮೀ ಸ್ಪರ್ಧೆಯಲ್ಲಿ ತೃತೀಯ ಹಾಗೂ 4x100ಮೀ ರಿಲೇಯಲ್ಲಿ ದ್ವಿತೀಯ, ಪ್ರೀತಿ ಗುಂಡು ಎಸೆತದಲ್ಲಿ ದ್ವಿತೀಯ, ಲಲಿತಾ 600ಮೀ ಮತ್ತು 4x100ಮೀ ರಿಲೇಯಲ್ಲಿ ದ್ವಿತೀಯ ಹಾಗೂ ಸಿಂಚನಾ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದರು.

17 ವರ್ಷ ವಯೋಮಿತಿ ವಿಭಾಗದಲ್ಲಿ ಆದಿತ್ಯ 1500ಮೀ, 800ಮೀ ಹಾಗೂ 4x400ಮೀ ರಿಲೇಯಲ್ಲಿ ಪ್ರಥಮ ಮತ್ತು 400ಮೀನಲ್ಲಿ ದ್ವಿತೀಯ ಸ್ಥಾನ ಪಡೆದರು. ತುಷಾರ್ 4x400ಮೀ ರಿಲೇಯಲ್ಲಿ ಪ್ರಥಮ, 1500ಮೀ ಹಾಗೂ 800ಮೀನಲ್ಲಿ ದ್ವಿತೀಯ, ಆದರ್ಶ್ 4x100ಮೀ ರಿಲೇಯಲ್ಲಿ ಪ್ರಥಮ, 100ಮೀ ಹಾಗೂ 200ಮೀನಲ್ಲಿ ದ್ವಿತೀಯ, ಸುಭಾಷ್ 110ಮೀ ಹರ್ಡಲ್ಸ್ ಹಾಗೂ 4x400ಮೀ ರಿಲೇಯಲ್ಲಿ ಪ್ರಥಮ, 400ಮೀ ಹರ್ಡಲ್ಸ್‌ನಲ್ಲಿ ತೃತೀಯ ಸ್ಥಾನ ಗಳಿಸಿದರು. ಶ್ರೀಹರಿ ಚಕ್ರ ಎಸೆತದಲ್ಲಿ ಪ್ರಥಮ, ಕುಶಾಂತ್ ಗುಂಡು ಎಸೆತದಲ್ಲಿ ಪ್ರಥಮ ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ, ನಿಖಿಲ್ ಹ್ಯಾಮರ್ ಎಸೆತದಲ್ಲಿ ಪ್ರಥಮ ಹಾಗೂ ಜಾವೆಲಿನ್ ಎಸೆತದಲ್ಲಿ ದ್ವಿತೀಯ, ಅಮನ್ 4x400ಮೀ ರಿಲೇ ಮತ್ತು 4x100ಮೀ ರಿಲೇಯಲ್ಲಿ ಪ್ರಥಮ, 400ಮೀ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದರು.

ಮಲ್ಲಪ್ಪ 3000ಮೀನಲ್ಲಿ ಪ್ರಥಮ, ನಿಂಗಣ್ಣ 4x100ಮೀ ರಿಲೇಯಲ್ಲಿ ಪ್ರಥಮ, ಪೋಲೋವಾಲ್ಟ್ ಹಾಗೂ ತ್ರಿವಿಧ ಜಿಗಿತದಲ್ಲಿ ದ್ವಿತೀಯ, ಹರ್ಷದ್ ತ್ರಿವಿಧ ಜಿಗಿತದಲ್ಲಿ ತೃತೀಯ ಹಾಗೂ ಚಕ್ರವರ್ತಿ 4x100ಮೀ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಅನುಶ್ರೀ ಪಿ. ಎಸ್. 1500ಮೀ ಹಾಗೂ 4x400ಮೀ ರಿಲೇಯಲ್ಲಿ ಪ್ರಥಮ, 800ಮೀನಲ್ಲಿ ದ್ವಿತೀಯ, ಮೇಘಾ 400ಮೀ, 800ಮೀ ಹಾಗೂ 4x400ಮೀ ರಿಲೇಯಲ್ಲಿ ಪ್ರಥಮ, ಮಾಲಾ ಟಿ. ಆರ್. 4x100ಮೀ ರಿಲೇಯಲ್ಲಿ ಪ್ರಥಮ, 100ಮೀನಲ್ಲಿ ತೃತೀಯ, ಸವಿತಾ ಗುಂಡು ಎಸೆತದಲ್ಲಿ ತೃತೀಯ, ಪೂರ್ಣಿಮಾ 1500ಮೀನಲ್ಲಿ ತೃತೀಯ, ಅಮೂಲ್ಯಾ 100ಮೀ ಹಾಗೂ 400ಮೀ ಹರ್ಡಲ್ಸ್‌ಗಳಲ್ಲಿ ದ್ವಿತೀಯ ಸ್ಥಾನ ಪಡೆದರು. ಸುಜಾತ 4x400ಮೀ ಹಾಗೂ 4x100ಮೀ ರಿಲೇಗಳಲ್ಲಿ ಪ್ರಥಮ, 400ಮೀನಲ್ಲಿ ದ್ವಿತೀಯ, ರಕ್ಷಿತಾ ತ್ರಿವಿಧ ಜಿಗಿತ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ತೃತೀಯ, ಅನನ್ಯ 3ಕಿಮೀ ನಡಿಗೆಯಲ್ಲಿ ದ್ವಿತೀಯ, ಜ್ಞಾನೇಶ್ವರಿ ಉದ್ದ ಜಿಗಿತದಲ್ಲಿ ದ್ವಿತೀಯ, ಸಮೀಕ್ಷಾ 400ಮೀ ಹರ್ಡಲ್ಸ್ ಹಾಗೂ 4x400ಮೀ ರಿಲೇಯಲ್ಲಿ ಪ್ರಥಮ, ವಿಜಯಲಕ್ಷ್ಮಿ 3000ಮೀನಲ್ಲಿ ಪ್ರಥಮ, ಅನುಶ್ರೀ ಎಂ. 3000ಮೀನಲ್ಲಿ ದ್ವಿತೀಯ, ಪೂರ್ವಿ ಹ್ಯಾಮರ್ ಎಸೆತದಲ್ಲಿ ಪ್ರಥಮ, ಅಂಜುಶ್ರೀ ಹಾಗೂ ವೈಷ್ಣವಿ 4x100ಮೀ ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಕೂಟದಲ್ಲಿ ಮಿಂಚಿದ ವಿದ್ಯಾರ್ಥಿಗಳ ಅಮೋಘ ಕ್ರೀಡಾ ಸಾಧನೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಹರ್ಷ ವ್ಯಕ್ತಪಡಿಸಿದ್ದು, ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ