ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಮಂಡಳಿ ಸಭೆಯು ಅಧ್ಯಕ್ಷ ವಿಜಯ ರೈ ಕೋರಂಗ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಬೆಳೆ ವಿಮಾ ಪರಿಹಾರ ಮತ್ತು ಪಾವತಿಯಲ್ಲಿ ಉಂಟಾಗಿರುವ ತಾರತಮ್ಯ ಹಾಗೂ ಕನಿಷ್ಠ ಪರಿಹಾರ ಪಾವತಿಯಾಗಿರುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಬಾಧಿತ ರೈತರಿಗೆ ತಕ್ಷಣವೇ ನ್ಯಾಯಯುತ ಪರಿಹಾರ ಒದಗಿಸುವಂತೆ ಸರಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು. ಮುಂಬರುವ ವರ್ಷದ ನೂತನ ಟರ್ಮ್ ಶೀಟ್ ತಯಾರಿಸುವ ಸಂದರ್ಭದಲ್ಲಿ ಪ್ರಸ್ತುತ ಎದುರಾಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದರ ಜೊತೆಗೆ, ರೈತರ ಬೇಡಿಕೆಗಳು, ತಾಂತ್ರಿಕ ಹಾಗೂ ಭೌಗೋಳಿಕ ಮಾಹಿತಿಗಳ ಬೇಡಿಕೆ ಪಟ್ಟಿಯನ್ನು ರಾಜ್ಯ ಕೃಷಿಕ ಸಮಾಜದ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದರೊಂದಿಗೆ ತೋಟಗಾರಿಕಾ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಲಭ್ಯವಿರುವ ಸೋಲಾರ್ ಪಂಪ್ ಸೆಟ್ಗಳನ್ನು ಪ್ರತಿ ತಾಲೂಕಿಗೆ ಕನಿಷ್ಠ 10 ಘಟಕಗಳಂತೆ ವಿತರಿಸಬೇಕೆಂದು ಆಗ್ರಹಿಸಲಾಯಿತು. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಆಣೆಕಟ್ಟುಗಳ ಸಮರ್ಪಕ ನಿರ್ವಹಣೆಯತ್ತ ಸರಕಾರ ಗಮನಹರಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಇದೇ ವೇಳೆ ಜಂಟಿ ಕೃಷಿ ನಿರ್ದೇಶಕರು ಮಾತನಾಡಿ, ಬರಪೀಡಿತ ತಾಲೂಕಿನ ಭತ್ತ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ಗೆ 8,500 ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಹಾಗೆಯೇ ತಾಲೂಕು ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಪಿವಿಸಿ ಪೈಪ್ಗಳನ್ನು ವಿತರಿಸಲಾಗುತ್ತಿದ್ದು, ಆಸಕ್ತರು ತಾಲೂಕು ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಅಣಬೆ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದು, ಅಗತ್ಯ ತರಬೇತಿ ಹಾಗೂ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಪ್ರತಿನಿಧಿ ಪದ್ಮನಾಭ ರೈ, ಕಾರ್ಯದರ್ಶಿ ರಾಕೇಶ್ ರೈ ಕೇಡೆಂಜಿ, ಕೋಶಾಧಿಕಾರಿ ಕುಸುಮಾಧರ ಸುಳ್ಯ, ಸಂಜೀವ ಮಟದೂರು, ದೇವದಾಸ್ ಭಂಡಾರಿ ಉಳ್ಳಾಲ, ರಾಜು ಪೂಜಾರಿ ಬೆಳ್ತಂಗಡಿ, ಮಹಾವೀರ ಜೈನ್ ಬೆಳ್ತಂಗಡಿ, ಮಹೇಶ್ ಕೆ. ಸವಣೂರು, ಪದ್ಮರಾಜ ಬಲಾಲ್ ಬಂಟ್ವಾಳ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ, ರೇಷ್ಮೆ ಸಹಾಯಕ ನಿರ್ದೇಶಕಿ ಶಾಂಭವಿ, ಸಹಾಯಕ ತೋಟಗಾರಿಕಾ ಅಧಿಕಾರಿ ದರ್ಶನ್ ಜಿ., ಕೆ.ವಿ.ಕೆ. ಮುಖ್ಯಸ್ಥ ಡಾ. ಜಿ.ಟಿ. ರಮೇಶ್ ಹಾಗೂ ವಿಜ್ಞಾನಿ ಡಾ. ಹರೀಶ್ ಉಪಸ್ಥಿತರಿದ್ದರು. ಜಂಟಿ ಕೃಷಿ ನಿರ್ದೇಶಕ ಡಾ. ಹೊನ್ನಪ್ಪ ಗೋವಿಂದ ಗೌಡ ಧನ್ಯವಾದ ಅರ್ಪಿಸಿದರು.