image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನಿರಾಕರಿಸದಂತೆ ಬ್ಯಾಂಕುಗಳಿಗೆ ಅಲ್ಪಸಂಖ್ಯಾತರ ಆಯೋಗ ಸೂಚನೆ

ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನಿರಾಕರಿಸದಂತೆ ಬ್ಯಾಂಕುಗಳಿಗೆ ಅಲ್ಪಸಂಖ್ಯಾತರ ಆಯೋಗ ಸೂಚನೆ

ಮಂಗಳೂರು: ವಿದ್ಯಾರ್ಥಿಗಳಿಗೆ ಬ್ಯಾಂಕುಗಳು ಶಿಕ್ಷಣ ಸಾಲ ನೀಡುವುದನ್ನು ನಿರಾಕರಿಸಬಾರದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ತಂದೆ-ತಾಯಿಯ ಸಿಬಿಲ್ ಸ್ಕೋರ್ (CIBIL Score) ಅಥವಾ ಸಾಲ ಎನ್‌ಪಿಎ (NPA) ಕಾರಣಗಳನ್ನು ನೀಡಿ ಬ್ಯಾಂಕುಗಳು ಸಾಲ ತಿರಸ್ಕರಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ನಿಯಮಗಳ ಪ್ರಕಾರ ₹7.5 ಲಕ್ಷದವರೆಗಿನ ಶಿಕ್ಷಣ ಸಾಲಕ್ಕೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ ಹಾಗೂ ಈ ಕುರಿತು ಸರ್ಕಾರ ಮತ್ತು ಆರ್‌ಬಿಐನಿಂದ ಸ್ಪಷ್ಟ ನಿರ್ದೇಶನಗಳಿವೆ ಎಂದು ಅವರು ನೆನಪಿಸಿದರು. ಒಂದು ವೇಳೆ ಸಾಲ ನೀಡಲು ಬ್ಯಾಂಕುಗಳು ವಿಳಂಬ ಮಾಡಿದರೆ ಅಥವಾ ತಿರಸ್ಕರಿಸಿದರೆ ವಿದ್ಯಾರ್ಥಿಗಳು ತಕ್ಷಣ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಇದೇ ವೇಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯ 6 ವರ್ಷದೊಳಗಿನ ಮಕ್ಕಳ ನಿಖರ ಅಂಕಿ-ಸಂಖ್ಯೆ ಸಂಗ್ರಹಿಸಿ ಶಿಕ್ಷಣ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು ಹಾಗೂ ವಸತಿ ಯೋಜನೆಗಳಲ್ಲಿ ಅನುದಾನ ಕೊರತೆಯಾದರೆ ಉದ್ಯೋಗ ಖಾತರಿ ಅಥವಾ ಕಾರ್ಮಿಕ ಇಲಾಖೆ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿದರು.

ದಕ್ಷಿಣ ಕನ್ನಡ ಹಾಗೂ ಮಂಗಳೂರು ನಗರದಲ್ಲಿ ಶಾಂತಿ ನೆಮ್ಮದಿ ನೆಲೆಸಿದ್ದು, ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡಿದ್ದಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆಯನ್ನು ಅವರು ಅಭಿನಂದಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್‌ಪಿ ಡಾ. ಅರುಣ್ ಕೆ. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ