ಮಂಗಳೂರು : ಮಂಗಳೂರಿನ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಮೂಲಕ ಸ್ಥಾಪಿಸಲಾಗಿರುವ ರೆವರೆಂಡ್ ಡಾ. ಫರ್ಡಿನಾಂಡ್ ಕಿಟ್ಟೆಲ್ ಫೌಂಡೇಶನ್ ವತಿಯಿಂದ ನೀಡಲಾಗುವ ಪ್ರಥಮ ‘ರೆವರೆಂಡ್ ಡಾ. ಫರ್ಡಿನಾಂಡ್ ಕಿಟ್ಟೆಲ್ ಪ್ರಶಸ್ತಿ’ಗೆ ಹಿರಿಯ ವಿದ್ವಾಂಸರಾದ ಪ್ರೊ. ಎ.ವಿ. ನಾವಡ ಹಾಗೂ ಧಾರವಾಡದ ಪ್ರೊ. ವೀರಣ್ಣ ರಾಜೂರ ಆಯ್ಕೆಯಾಗಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಶೋಧನೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡಿದ ಗಣನೀಯ ಕೊಡುಗೆಯನ್ನು ಪರಿಗಣಿಸಿ ಈ ಗೌರವವನ್ನು ಘೋಷಿಸಲಾಗಿದೆ.
ಕಿಟ್ಟೆಲ್ ಅವರ ಜೀವನ-ಕೃತಿಗಳ ಕುರಿತು ಸಂಶೋಧನೆ, ಭಾಷಾವಿಜ್ಞಾನ, ಕೋಶವಿಜ್ಞಾನ, ಜಾನಪದ, ಹರಿದಾಸ ಸಾಹಿತ್ಯ ಹಾಗೂ ತುಳು ನಿಘಂಟು ಯೋಜನೆಯಲ್ಲಿ ಪ್ರೊ. ಎ.ವಿ. ನಾವಡ ಅವರು ಮಹತ್ವದ ಸಾಧನೆ ಮಾಡಿದ್ದಾರೆ. ಮತ್ತೊಂದೆಡೆ, ನಡುಗನ್ನಡ ಸಾಹಿತ್ಯ, ವಚನ ಸಾಹಿತ್ಯ, ಹಸ್ತಪ್ರತಿ ಸಂಪಾದನೆ ಮತ್ತು ಸಾಹಿತ್ಯ ಸಂಶೋಧನೆಯಲ್ಲಿ ಪ್ರೊ. ವೀರಣ್ಣ ರಾಜೂರ ಅವರು ವಿಶಿಷ್ಟ ಕೊಡುಗೆ ನೀಡಿದ್ದಾರೆ.
ಪ್ರೊ. ಕೆ. ಚಿನ್ನಪ್ಪ ಗೌಡ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಈ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ನವೆಂಬರ್ ೧೨ರಂದು ಮಂಗಳೂರಿನ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಬಿಶಪ್ ಜತನ್ನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.