ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 8ರ ಹೊಸಬೆಟ್ಟು–ಸುರತ್ಕಲ್ ಪ್ರದೇಶದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ರಾಹುಲ್ ರತ್ನಂ ಪಾಂಡೆ (ಐಎಎಸ್) ಅವರ ನೇತೃತ್ವದಲ್ಲಿ 2ನೇ 'ವಾಕ್ ವಿತ್ ಕಮಿಷನರ್' ಕಾರ್ಯಕ್ರಮವು ಮಂಗಳವಾರ ನಡೆಯಿತು.
ಸುರತ್ಕಲ್ ಜಂಕ್ಷನ್ನಿಂದ ಪ್ರಾರಂಭಗೊಂಡ ಈ ನಡಿಗೆಯು ಸುರತ್ಕಲ್ ಮಾರುಕಟ್ಟೆ, ಮುಡಾ ಮಾರುಕಟ್ಟೆ, ತಾತ್ಕಾಲಿಕ ಮಾರುಕಟ್ಟೆ ವಲಯ, ಪ್ರಿಯದರ್ಶಿನಿ ಕಾಲನಿ ಹಾಗೂ ಗೋವಿಂದ ದಾಸ್ ಕಾಲೇಜು ಮಾರ್ಗವಾಗಿ ಸಾಗಿ ಅಂತಿಮವಾಗಿ ಇಂದಿರಾ ಕ್ಯಾಂಟೀನ್ನಲ್ಲಿ ಮುಕ್ತಾಯವಾಯಿತು.
ಕಾರ್ಯಕ್ರಮದ ಆರಂಭದಲ್ಲೇ ಸ್ಥಳೀಯ ನಾಗರಿಕರು ತಮ್ಮ ವ್ಯಾಪ್ತಿಯ ವಿವಿಧ ಮೂಲಸೌಕರ್ಯ ಹಾಗೂ ನಾಗರಿಕ ಸಮಸ್ಯೆಗಳ ಕುರಿತು ಆಯುಕ್ತರಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು. ಪ್ರಮುಖವಾಗಿ ಸುರತ್ಕಲ್ ಭಾಗದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಒಳಚರಂಡಿ (ಯುಜಿಡಿ) ಸಮಸ್ಯೆಗೆ ಪರಿಹಾರ ಒದಗಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಆಯುಕ್ತರು ಯುಜಿಡಿ ಕಾಮಗಾರಿಗಳಿಗಾಗಿ ₹25 ಕೋಟಿ ಮೀಸಲಿಡಲಾಗಿದ್ದು, ಶೀಘ್ರವೇ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಮುಡಾ ಮಾರುಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಳಿಗೆಗಳ ಹಂಚಿಕೆ ಪ್ರಕ್ರಿಯೆ ಕಳೆದ ಎರಡು ವರ್ಷಗಳಿಂದ ವಿಳಂಬವಾಗಿರುವುದಕ್ಕೆ ಆಯುಕ್ತರು ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದರು. ವಿಳಂಬಕ್ಕೆ ಕಾರಣವಾದ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ಮುಡಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ತಕ್ಷಣ ಬಗೆಹರಿಸುವಂತೆ ಸೂಚಿಸಿದರು. ಸುರತ್ಕಲ್ ಹಾಗೂ ಮುಡಾ ಮಾರುಕಟ್ಟೆಗಳನ್ನು ಸಂಪೂರ್ಣವಾಗಿ ಕಾರ್ಯಾಚರಣೆಗೆ ತರಲು ಅಗತ್ಯವಿರುವ ನೀರು ಮತ್ತು ವಿದ್ಯುತ್ ಸಂಪರ್ಕಗಳ ಸ್ಥಿತಿಗತಿಯನ್ನು ಪರಿಶೀಲಿಸಿದ ಅವರು, ಮುಂದಿನ ವಾರ ಮಾರುಕಟ್ಟೆಯ 64 ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ನವೆಂಬರ್ 10ರ ಒಳಗಾಗಿ ನಿಗದಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಜೊತೆಗೆ, ಮಾರುಕಟ್ಟೆ ಸುತ್ತಮುತ್ತಲಿನ ಅನಧಿಕೃತ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಯನ್ನು ಪಾಲಿಕೆ ಸಭಾ ಕಾರ್ಯಸೂಚಿಯಲ್ಲಿ ಸೇರಿಸಿ ಟೌನ್ ವೆಂಡಿಂಗ್ ಕಮಿಟಿಗೆ ಶಿಫಾರಸು ಮಾಡಲು ಸೂಚಿಸಲಾಗಿದ್ದು, ಸಂಬಂಧಪಟ್ಟವರಿಗೆ 15 ದಿನಗಳ ಕಾಲಾವಕಾಶ ನೀಡಿ ನಂತರ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಪರಿಶೀಲನೆ ವೇಳೆ ಸ್ಥಳೀಯರೊಬ್ಬರು ಗಮನಕ್ಕೆ ತಂದ ಕುಡಿಯುವ ನೀರಿನ ಕೊಳವೆ ಸಮಸ್ಯೆಯು ಮುಲ್ಕಿ ಪುರಸಭೆ ವ್ಯಾಪ್ತಿಗೆ ಸೇರಿದ್ದೆಂದು ತಿಳಿದುಬಂದ ಹಿನ್ನೆಲೆಯಲ್ಲಿ, ದುರಸ್ತಿ ಕಾಮಗಾರಿ ನಡೆಸಿ ಅದರ ವೆಚ್ಚದ ಬಿಲ್ ಅನ್ನು ಮುಲ್ಕಿ ಪುರಸಭೆಗೆ ಸಲ್ಲಿಸಲು ತಿಳಿಸಲಾಯಿತು.
ಈ ವಿಷಯವಾಗಿ ನವೆಂಬರ್ 2ರಂದು ಮುಲ್ಕಿ ಪುರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಲು ನಿರ್ದೇಶಿಸಲಾಯಿತು. ಎಂಆರ್ಪಿಎಲ್ ರಸ್ತೆಯಲ್ಲಿರುವ ಪಾಲಿಕೆಯ ಕಸ ಸಾಗಣೆ ವಾಹನಗಳ ನಿಲುಗಡೆ ಪ್ರದೇಶದಲ್ಲಿ ನೈರ್ಮಲ್ಯ ಹಾಗೂ ಸ್ವಚ್ಛತಾ ಲೋಪಗಳ ದೂರು ಬಂದ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ವಹಿಸಲು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ಇದಲ್ಲದೆ, ಮದರಬೆಟ್ಟು ಸಂಪರ್ಕಿಸುವ 1,500 ಮೀಟರ್ ಉದ್ದದ ರಸ್ತೆ ಅಗಲೀಕರಣಕ್ಕೆ ಕೊಂಕಣ ರೈಲ್ವೆ ಸೇತುವೆ ತಡೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೊಂಕಣ ರೈಲ್ವೆ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಲು ಪತ್ರ ಸಿದ್ಧಪಡಿಸುವಂತೆ ಹಾಗೂ ಮುಂದಿನ ವಾರ ಎಂಆರ್ಪಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಆಯುಕ್ತರು ಸೂಚಿಸಿದರು. ಪ್ರಿಯದರ್ಶಿನಿ ಕಾಲನಿಯಲ್ಲಿ ಚರಂಡಿ ಸಮಸ್ಯೆ ಬಗೆಹರಿಸಲು ಹಾಗೂ ಅಪಾಯಕಾರಿ ವಿದ್ಯುತ್ ತಂತಿಗಳಿಂದ ಅವಘಡಗಳು ಸಂಭವಿಸದಂತೆ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ನಿರ್ದೇಶಿಸಲಾಯಿತು.
ನಡಿಗೆಯ ಕೊನೆಯಲ್ಲಿ ಸುರತ್ಕಲ್ನ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿದ ಆಯುಕ್ತರು, ಅಧಿಕಾರಿಗಳೊಂದಿಗೆ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಸೂಕ್ತ ಸೇವೆ ಸಿಗುವಂತೆ ನೋಡಿಕೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ನರೇಶ್ ಪಿ. ಶೆಣೈ ಸೇರಿದಂತೆ ನಗರಾಭಿವೃದ್ಧಿ, ಎಂಜಿನಿಯರಿಂಗ್, ಆರೋಗ್ಯ ಹಾಗೂ ಕಂದಾಯ ವಿಭಾಗದ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.