ಕಠ್ಮಂಡು/ಮಂಗಳೂರು : ಪ್ರಾಚೀನ ಸನಾತನ ಸಂಸ್ಕಾರ ಮತ್ತು ಪರಂಪರೆಯ ತುಳು ಭಾಷೆಯನ್ನು ಭಾರತ ಸರ್ಕಾರವು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಿ ಗೌರವಿಸಬೇಕು ಎಂದು ಕಠ್ಮಂಡುವಿನ ಶ್ರೀ ಪಶುಪತಿನಾಥ ದೇವಸ್ಥಾನದ ಮುಖ್ಯ ಅರ್ಚಕ ರಾವಲ್ ಶ್ರೀ ಗಣೇಶ್ ಭಟ್ ಕರೆ ನೀಡಿದ್ದಾರೆ.
ನೇಪಾಳದ ಕಠ್ಮಂಡುವಿನಲ್ಲಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ನೇಪಾಳ ಘಟಕದ ಸಾರಥ್ಯದಲ್ಲಿ ನಡೆದ 'ಭಾರತ–ನೇಪಾಳ ತುಳುವ ಮಹಾಸಭೆ – 2026' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಾದ್ಯಂತ ನೆಲೆಸಿರುವ ತುಳುವರ ಭಾವೈಕ್ಯತೆಯನ್ನು ಬೆಳೆಸುವ ಮೂಲಕ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಲಪಡಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಕೇಂದ್ರೀಯ ಕಾರ್ಯಾಧ್ಯಕ್ಷ ಡಾ. ರಾಜೇಶ್ ಕೃಷ್ಣ ಆಳ್ವ ಮಾತನಾಡಿ, "ಗಡಿ ದಾಟಿದ ತುಳುವರ ವೈಭವ" ಎಂಬ ಆಶಯದೊಂದಿಗೆ ವಿಶ್ವದಾದ್ಯಂತ ಇರುವ ತುಳುವರನ್ನು ಒಂದೇ ವೇದಿಕೆಗೆ ತರುವುದು ಮತ್ತು ತುಳು ಭಾಷಾ ಸಂರಕ್ಷಣೆ ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದರು. ಈಗಾಗಲೇ 18 ರಾಷ್ಟ್ರಗಳಲ್ಲಿ ತುಳುವ ಮಹಾಸಭೆಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ಡಾ. ಭರತ್ ಜಂಗಮ್ ಮಾತನಾಡಿ, ಭಾರತ-ನೇಪಾಳದ ಸನಾತನ ಸಂಸ್ಕೃತಿಗೆ ತುಳುವ ಕರ್ನಾಟಕದ ಕೊಡುಗೆ ಅಪಾರ ಎಂದು ಹೇಳಿದರು. 125 ವರ್ಷಗಳ ಪರಂಪರೆಯ ತುಳುನಾಡ ಗೀತೆಯೊಂದಿಗೆ ಆರಂಭಗೊಂಡ ಈ ಸಮಾವೇಶದಲ್ಲಿ ವಿವಿಧ ವಿಚಾರ ಸಂಕಿರಣಗಳು, ಪ್ರಬಂಧ ಮಂಡನೆ ಹಾಗೂ ಪಶುಪತಿನಾಥ ಮತ್ತು ವಾಸುಕಿ ದೇವಸ್ಥಾನದ ಅರ್ಚಕರಿಗೆ ಗೌರವ ಸನ್ಮಾನ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು.