ಮಂಗಳೂರು : ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯುನಿಪೋರ್ಟಲ್ ವ್ಯಾಟ್ಸ್ (Uniportal VATS) ತಂತ್ರಜ್ಞಾನದ ಮೂಲಕ ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಶ್ವಾಸಕೋಶದ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಸಂಸ್ಥೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಲ್ರಾಯ್ ಸಲ್ಡಾನ್ಹಾ ಅವರ ನೇತೃತ್ವದ ವೈದ್ಯರ ತಂಡವು ಈ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದೆ.
ಚೀನಾದಲ್ಲಿ ಯುನಿಪೋರ್ಟಲ್ ವ್ಯಾಟ್ಸ್ ತಂತ್ರಜ್ಞಾನದ ಪ್ರವರ್ತಕ ಡಾ. ಡಿಯಾಗೋ ಗೊನ್ಸಾಲೇಜ್ ರಿವಾಸ್ ಅವರ ಮಾರ್ಗದರ್ಶನದಲ್ಲಿ ಸುಧಾರಿತ ತರಬೇತಿ ಪಡೆದಿರುವ ಡಾ. ಎಲ್ರಾಯ್, ಎದೆಗೂಡಿನ ಪಕ್ಕದಲ್ಲಿ ಕೇವಲ 3 ರಿಂದ 4 ಸೆಂ.ಮೀ ನಷ್ಟು ಸಣ್ಣ ಪ್ರಮಾಣದ ಗಾಯದ ಮೂಲಕವೇ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಈ ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನದಿಂದಾಗಿ ಮೂಳೆಗಳನ್ನು ಕತ್ತರಿಸುವ ಅಗತ್ಯವಿರುವುದಿಲ್ಲ. ಪರಿಣಾಮವಾಗಿ ರೋಗಿಗಳಿಗೆ ಅತಿ ಕಡಿಮೆ ನೋವು, ಶೀಘ್ರ ಚೇತರಿಕೆ ಹಾಗೂ ಕಡಿಮೆ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಸಾಧ್ಯವಾಗುತ್ತದೆ.
ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರೂ ರೋಗಿಗಳು 5 ರಿಂದ 7 ದಿನಗಳಲ್ಲಿ ಗುಣಮುಖರಾಗಿ ಮನೆಗೆ ಮರಳಿದ್ದು, ಇದೀಗ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಶಸ್ತ್ರಚಿಕಿತ್ಸೆಯ ಯಶಸ್ಸಿನಲ್ಲಿ ಸರ್ಜಿಕಲ್ ಆಂಕೊಲಾಜಿ, ಶ್ವಾಸಕೋಶ ವೈದ್ಯಕೀಯ ವಿಭಾಗ ಹಾಗೂ ಅರಿವಳಿಕೆ ವಿಭಾಗದ ವೈದ್ಯರಾದ ಡಾ. ಶ್ರೀಶಂಕರ್, ಡಾ. ಕರಿಷ್ಮಾ, ಡಾ. ಅನಂತ್ ಸೋಮಯಾಜಿ ಮತ್ತು ಶುಶ್ರೂಷಾ ಸಿಬ್ಬಂದಿ ಪ್ರಮುಖ ಪಾತ್ರವಹಿಸಿದ್ದಾರೆ. ಕರಾವಳಿ ಕರ್ನಾಟಕ ಭಾಗದಲ್ಲಿ ಇಂತಹ ಜಾಗತಿಕ ಮಟ್ಟದ ಸುಧಾರಿತ ವೈದ್ಯಕೀಯ ಸೇವೆಯನ್ನು ಒದಗಿಸಿರುವ ವೈದ್ಯಕೀಯ ತಂಡದ ಸಾಧನೆಯನ್ನು ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ಫಾದರ್ ಫೌಸ್ಟಿನ್ ಎಲ್. ಲೋಬೊ ಸೇರಿದಂತೆ ಆಡಳಿತ ಮಂಡಳಿ ಮುಕ್ತಕಂಠದಿಂದ ಶ್ಲಾಘಿಸಿದೆ.