image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ಜೆಸಿಐ ವಲಯ 15ರ ಆರ್ಯ ವಲಯ ಸಮ್ಮೇಳನ

ಮಂಗಳೂರಿನಲ್ಲಿ ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ಜೆಸಿಐ ವಲಯ 15ರ ಆರ್ಯ ವಲಯ ಸಮ್ಮೇಳನ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಅಂತರಾಷ್ಟ್ರೀಯ ಜೂನಿಯರ್ ಚೇಂಬರ್ (ಜೆಸಿಐ) ವಲಯ 15ರ 'ಆರ್ಯ' ನಾಮಾಂಕಿತ 2026ರ ವಾರ್ಷಿಕ ವಲಯ ಸಮ್ಮೇಳನವು ಅಕ್ಟೋಬರ್ 31 ಶನಿವಾರ ಮತ್ತು ನವೆಂಬರ್ 1 ಭಾನುವಾರದಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನ ವಿ.ಕೆ. ಶೆಟ್ಟಿ ಅಡಿಟೋರಿಯಂನಲ್ಲಿ ವೈಭವಯುತವಾಗಿ ನಡೆಯಲಿದೆ. ಜೆಸಿಐ ವಿಟ್ಲ ಹಾಗೂ ಜೆಸಿಐ ತುಂಬೆ ಎಲೈಟ್ ಘಟಕಗಳ ಜಂಟಿ ಆತಿಥ್ಯದಲ್ಲಿ ಈ ಎರಡು ದಿನಗಳ ಬೃಹತ್ ಸಮಾವೇಶ ಆಯೋಜನೆಗೊಂಡಿದ್ದು, ವಲಯದಾದ್ಯಂತ ಸುಮಾರು 1,000ಕ್ಕೂ ಹೆಚ್ಚು ಜೇಸಿ ಸದಸ್ಯರು ಭಾಗವಹಿಸಲಿದ್ದಾರೆ.

ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜೆಸಿಐ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಡಿ.ಕೆ.ಎಸ್. ಹೆಗ್ಡೆ ದಿಕ್ಸೂಚಿ ಭಾಷಣ ಮಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಜೆಸಿಐ ಆಡಳಿತ ಸಮಿತಿ ಸದಸ್ಯ ವೈ. ಸುಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜಮುಖಿ ಸಾಧನೆಗಾಗಿ ಸೌದಿ ಅರೇಬಿಯಾದ 'ಅಲ್ ಮುಝೈನ್' ಸಂಸ್ಥೆಯ ಮುಖ್ಯಸ್ಥರು ಹಾಗೂ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಚೆಯರ್‌ಮೆನ್ ಝಕರಿಯ ಜೋಕಟ್ಟೆ ಅವರಿಗೆ ಗೌರವಾನ್ವಿತ 'ವರ್ಷದ ವ್ಯಕ್ತಿ' ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಕಾರ್ಯಕ್ರಮದಲ್ಲಿ ಪೂರ್ವ ವಲಯಾಧ್ಯಕ್ಷ ಸಂಪತ್ ಬಿ. ಸುವರ್ಣ, ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಇಶಾನ್ ಆರ್. ಅಗರ್ವಾಲ್, ನಿಕಟಪೂರ್ವ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಹಾಗೂ ಜೆ.ಎ.ಸಿ. ವಲಯಾಧ್ಯಕ್ಷ ಜಬ್ಬಾರ್ ಸಾಹೇಬ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ಶಮ್ಮಿ ಲೈನ್ ಡ್ಯಾನ್ಸ್ ಅಕಾಡೆಮಿಯ ಅಂತರಾಷ್ಟ್ರೀಯ ಕಲಾವಿದರಾದ ಶೆರಲೈನ್ ಸಿಕ್ವೇರಾ ಹಾಗೂ ತಂಡದವರಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಉತ್ಪನ್ನಗಳ ಎಕ್ಸ್'ಪೋ ಪ್ರದರ್ಶನವೂ ಏರ್ಪಾಟಾಗಲಿದೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸಭಾ ಕಲಾಪಗಳು, ವಿವಿಧ ಘಟಕಗಳ ಸಾಧನೆಗಳಿಗೆ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮುಂದಿನ ಸಾಲಿನ ವಲಯಾಧ್ಯಕ್ಷರ ಚುನಾವಣೆ ನಡೆಯಲಿದೆ.

ಪ್ರಸ್ತುತ ಮೂರು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ಜೆಸಿಐ ವಲಯ 15ರ 60 ಘಟಕಗಳಲ್ಲಿ ಒಟ್ಟು 6,000ಕ್ಕೂ ಹೆಚ್ಚು ಸಕ್ರಿಯ ಸದಸ್ಯರಿದ್ದಾರೆ. ತರಬೇತಿಯ ಮೂಲಕ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದೇ ಸಂಸ್ಥೆಯ ಮೂಲ ಉದ್ದೇಶವಾಗಿದ್ದು, 2026ನೇ ಸಾಲಿನಲ್ಲಿ ಶಾಲೆ, ಕಾಲೇಜು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ 1,200ಕ್ಕೂ ಹೆಚ್ಚು ತರಬೇತಿ ಶಿಬಿರಗಳನ್ನು ನಡೆಸಲಾಗಿದೆ. ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಪ್ಲಾಸ್ಟಿಕ್ ಬಾಟಲ್ ಮುಕ್ತ ಭಾರತದ ಪರಿಕಲ್ಪನೆಗೆ ಬೆಂಬಲವಾಗಿ 10,000 ಸ್ಟೀಲ್ ಬಾಟಲಿಗಳನ್ನು ವಿತರಿಸಲಾಗಿದೆ. 'ಕಮ್ಯುನಿಟಿ ಇಂಪಾಕ್ಟ್' ಯೋಜನೆಯಡಿ ವಸತಿ ರಹಿತರಿಗೆ ಮನೆ ನಿರ್ಮಾಣ, ಬಸ್ ತಂಗುದಾಣಗಳ ನಿರ್ಮಾಣ, ಆಸ್ಪತ್ರೆಗಳಿಗೆ ಪರೀಕ್ಷಾ ಉಪಕರಣ ಹಾಗೂ ವೀಲ್ ಚೇರ್‌ಗಳ ಕೊಡುಗೆ ಮತ್ತು ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾಯಕ ಮಾಡಲಾಗಿದೆ. ಜೊತೆಗೆ 2,000 ಯೂನಿಟ್ ರಕ್ತದಾನ ಸಂಗ್ರಹಿಸಲಾಗಿದೆ. 'ಕಾಬಿಲ್' ಯೋಜನೆಯಡಿ ಮಹಿಳೆಯರ ಸ್ವಾವಲಂಬನೆಗಾಗಿ ತರಬೇತಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು, ಉದ್ಯಮಶೀಲತೆ ಉತ್ತೇಜಿಸಲು 'ಜೇಕಾಂ ಟೇಬಲ್', ಸದಸ್ಯರಿಗೆ ವೆಲ್ಫೇರ್ ಫಂಡ್ ಅಡಿಯಲ್ಲಿ 'ಡೆತ್ ಬೆನಿಫಿಟ್ ಕವರೇಜ್', 150 ಅರ್ಹ ಮಕ್ಕಳಿಗೆ ಶಾಶ್ವತ ಸ್ಕಾಲರ್‌ಶಿಪ್ ವಿತರಣೆ ಹಾಗೂ ವಾರ್ಷಿಕವಾಗಿ ನಾಯಕತ್ವ ಸೃಷ್ಟಿಸುವ ಹಲವು ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.

ಸಮ್ಮೇಳನದ ಯಶಸ್ವಿ ನಿರ್ವಹಣೆಗಾಗಿ ಜೆಸಿಐ ವಿಟ್ಲದ ಪೂರ್ವಾಧ್ಯಕ್ಷ ರಶೀದ್ ವಿಟ್ಲ ಸಮ್ಮೇಳನ ನಿರ್ದೇಶಕರಾಗಿ, ಆತಿಥ್ಯ ಘಟಕದ ಅಧ್ಯಕ್ಷ ಸಂದೀಪ್ ಹಾಗೂ ಸಹ ಆತಿಥ್ಯ ಘಟಕದ ಅಧ್ಯಕ್ಷೆ ಸಮತಾ ಕಿಶೋರ್ ಕಾರ್ಯಾಚರಿಸುತ್ತಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ಸಮ್ಮೇಳನ ನಿರ್ದೇಶಕ ರಶೀದ್ ವಿಟ್ಲ, ಜೆಸಿಐ ವಿಟ್ಲ ಅಧ್ಯಕ್ಷ ಸಂದೀಪ್ ಹಾಗೂ ವಲಯಾಧ್ಯಕ್ಷರ ಕಾರ್ಯನಿರ್ವಾಹಕ ಲೂವಿಸ್ ಮಸ್ಕರೇಞಸ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ