ಮಂಗಳೂರು : 'ಯಕ್ಷಾಂಗಣ ಮಂಗಳೂರು' ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ಅಂಗವಾಗಿ 14ನೇ ಆವೃತ್ತಿಯ 'ಯಕ್ಷಗಾನ ತಾಳಮದ್ದಳೆ ಸಪ್ತಾಹ - ಚತುರ್ದಶ ಸರಣಿ' ಕಾರ್ಯಕ್ರಮವನ್ನು 2026ರ ನವೆಂಬರ್ 22 ರಿಂದ 28ರವರೆಗೆ ಆಯೋಜಿಸಲಾಗಿದೆ.
ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಿರಂತರ ಏಳು ದಿನಗಳ ಕಾಲ ನಡೆಯಲಿರುವ ಈ 'ಸಂಘಟನಾ ಪರ್ವ' ಸಪ್ತಾಹದಲ್ಲಿ ಜಿಲ್ಲೆಯ ಆಯ್ದ ತಂಡಗಳಿಂದ ಅಪರೂಪದ ಪ್ರಸಂಗಗಳು ಮೂಡಿಬರಲಿವೆ. ಪ್ರಸಂಗಗಳಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಸಾಂದರ್ಭಿಕವಾಗಿ ಭಾಗವಹಿಸಲಿದ್ದಾರೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ. ಬಲ್ಮಠದ ಕುಡ್ಲ ಪೆವಿಲಿಯನ್ನಲ್ಲಿ ನಡೆದ ಯಕ್ಷಾಂಗಣದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನವೆಂಬರ್ 22ರ ಭಾನುವಾರ ಸಂಜೆ 4 ಗಂಟೆಗೆ ಸಪ್ತಾಹದ ಉದ್ಘಾಟನೆ ನಡೆಯಲಿದ್ದು, ಯಕ್ಷಾಂಗಣದ ಗೌರವಾಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಕಲಾಪೋಷಕರೊಬ್ಬರಿಗೆ 'ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ' ನೀಡಲಾಗುವುದು.
ಪ್ರತಿದಿನದ ತಾಳಮದ್ದಳೆಯೊಂದಿಗೆ ಅಗಲಿದ ಹಿರಿಯ ಕಲಾವಿದರ ಸಂಸ್ಮರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 28ರ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಕಲಾವಿದರೊಬ್ಬರಿಗೆ ಸೂಕ್ತ ನಿಧಿ ಸಮರ್ಪಣೆಯೊಂದಿಗೆ 'ಯಕ್ಷಾಂಗಣ ಗೌರವ ಪ್ರಶಸ್ತಿ' ಪ್ರದಾನ ಮಾಡಲಾಗುವುದು ಎಂದು ಸಮಿತಿ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ಮಾಹಿತಿ ನೀಡಿದ್ದಾರೆ. ಸಮಾರೋಪದಲ್ಲಿ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಉದ್ಯಮಿ ಕೆ.ಕೆ. ಶೆಟ್ಟಿ ಅಹ್ಮದ್ ನಗರ, ಶಿಕ್ಷಣ ಪ್ರಮುಖ ರವೀಂದ್ರಶೆಟ್ಟಿ ಉಳಿದೊಟ್ಟು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಸಂಚಾಲಕಿ ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ, ಕಾರ್ಯದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್ ಹಾಗೂ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು.