image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ರಶ್ಮಿ ಶೆಟ್ಟಿಯವರಿಗೆ ಪಿಎಚ್.ಡಿ. ಪದವಿ

ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ರಶ್ಮಿ ಶೆಟ್ಟಿಯವರಿಗೆ ಪಿಎಚ್.ಡಿ. ಪದವಿ

ಮೂಡುಬಿದಿರೆ : ಮೂಡುಬಿದಿರೆಯ ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ರಶ್ಮಿ ಶೆಟ್ಟಿ ಅವರು ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ (NLSIU) ಡಾಕ್ಟರೇಟ್ (ಪಿಎಚ್.ಡಿ.) ಪದವಿ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ರವರು ಅವರಿಗೆ ಪದವಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಉಪಸ್ಥಿತರಿದ್ದರು.

ರಶ್ಮಿ ಶೆಟ್ಟಿಯವರು ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ–2013ರ ಅನುಷ್ಠಾನ: ಕರ್ನಾಟಕದ ಗ್ರಾಮೀಣ ರಾಮನಗರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಮುಸ್ಲಿಂ ಸಮುದಾಯಗಳ ಅನುಭವಗಳ ಅಧ್ಯಯನ’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿದ್ದಾರೆ. ಆಹಾರ ಭದ್ರತೆಗೆ ಸಂಬಂಧಿಸಿದ ಕಾನೂನಿನ ಅನುಷ್ಠಾನವು ಗ್ರಾಮೀಣ ಪ್ರದೇಶಗಳ ಪರಿಶಿಷ್ಟ ಜಾತಿ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ ಬೀರುವ ಪರಿಣಾಮಗಳು, ಕಾಯ್ದೆಯ ಅನುಷ್ಠಾನದ ಅನುಭವಗಳು ಹಾಗೂ ಅದರ ಸಾಮಾಜಿಕ ಆಯಾಮಗಳನ್ನು ಅಧ್ಯಯನ ಮಾಡುವುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿತ್ತು. ಅವರು ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಸರಸು ಎಸ್ತರ್ ಥಾಮಸ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ.

ಸಂಶೋಧನೆ, ಬೋಧನೆ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಎರಡು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ರಶ್ಮಿ ಶೆಟ್ಟಿಯವರು ಕಾನೂನು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಇವರು, ಬೆಂಗಳೂರಿನ ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಕಾನೂನು ಮತ್ತು ನೀತಿ ಆಯ್ಕೆಯಲ್ಲಿ ಸ್ನಾತಕೋತ್ತರ ಕಾನೂನು ಪದವಿ ಪಡೆದಿದ್ದಾರೆ. ಜೊತೆಗೆ ಹೈದರಾಬಾದ್ ವಿಶ್ವವಿದ್ಯಾಲಯದಿಂದ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದು, ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿಯೂ (NET) ಉತ್ತೀರ್ಣರಾಗಿದ್ದಾರೆ.

ಸಾಮಾಜಿಕ ನ್ಯಾಯ ಹಾಗೂ ಮಾನವ ಹಕ್ಕುಗಳ ವಿಷಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಬರೆದಿರುವ ‘ಸಾಮಾಜಿಕ ನ್ಯಾಯ ಮತ್ತು ಕಾರ್ಮಿಕ ನ್ಯಾಯಶಾಸ್ತ್ರ’ ಎಂಬ ಕೃತಿಯನ್ನು ಪ್ರತಿಷ್ಠಿತ ಸೇಜ್ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ರಶ್ಮಿ ಶೆಟ್ಟಿಯವರು ಕಾರ್ಕಳ ನಂದಳಿಕೆಯ ಕಾನಬೆಟ್ಟಿನ ಸುಗಂಧಿ ಜೆ. ಶೆಟ್ಟಿ ಹಾಗೂ ದಿವಂಗತ ನ್ಯಾಯವಾದಿ ಬೋಳ ಪರ್ತಿಮಾರುಗುತ್ತು ಜಯರಾಮ ಶೆಟ್ಟಿಯವರ ಪುತ್ರಿಯಾಗಿದ್ದಾರೆ.

Category
ಕರಾವಳಿ ತರಂಗಿಣಿ