ಸುರತ್ಕಲ್: ಮುಕ್ಕ ಸಮೀಪದ ಪಾವಂಜೆ ಬ್ರಿಡ್ಜ್ ಬಳಿ ಇರುವ ಬಸ್ ನಿಲ್ದಾಣವು ಸೂಕ್ತ ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ಗಿಡಗಂಟಿ ಹಾಗೂ ಹುಲ್ಲಿನಿಂದ ಮುಚ್ಚಿಹೋಗಿ ಅಜ್ಞಾತ ಸ್ಥಿತ ತಲುಪಿತ್ತು. ಪ್ರತಿನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸೇರಿದಂತೆ ನೂರಾರು ಪ್ರಯಾಣಿಕರು ಬಸ್ ಕಾಯಲು ಪರದಾಡುವಂತಾಗಿತ್ತು. ಸಾರ್ವಜನಿಕರ ಈ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ 'ಮೀಡಿಯಾ ಮನಸುಗಳು' ತಂಡದ ಸದಸ್ಯರು ರವಿವಾರ ಸಂಜೆ ಶ್ರಮದಾನದ ಮೂಲಕ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸ್ಥಳೀಯ ಸಮಾಜಮುಖಿ ಸಂಘಟನೆಯಾದ 'ನಂದಿನಿ ಮಿತ್ರ ವೃಂದ' ಹಲವು ವರ್ಷಗಳ ಹಿಂದೆ ಈ ಬಸ್ ತಂಗುದಾಣವನ್ನು ನಿರ್ಮಿಸಿತ್ತು. ಆದರೆ, ಇದು ತೀರಾ ಕಿರಿದಾಗಿದ್ದು, ಇಲ್ಲಿಗೊಂದು ಸುಸಜ್ಜಿತ ಹಾಗೂ ವಿಶಾಲವಾದ ಬಸ್ ನಿಲ್ದಾಣವನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ಸ್ಥಳೀಯ ಗ್ರಾಮ ಪಂಚಾಯತ್ ಆಗಲಿ ಯಾವುದೇ ಆಸಕ್ತಿ ತೋರಿರಲಿಲ್ಲ. ಕೊನೆಗೆ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲು ಸಹ ಪಂಚಾಯತ್ ಮುಂದಾಗದ ಕಾರಣ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಈ ಕುರಿತು ಸ್ಥಳೀಯ ಸಾರ್ವಜನಿಕರೊಬ್ಬರು 'ಮೀಡಿಯಾ ಮನಸುಗಳು' ತಂಡದ ಗಮನ ಸೆಳೆದಿದ್ದರು.
ಜನರ ದೈನಂದಿನ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಉದ್ದೇಶದಿಂದ ರೂಪುಗೊಂಡಿರುವ 'ಮೀಡಿಯಾ ಮನಸುಗಳು' ತಂಡವು ತಮ್ಮ 12ನೇ ಸಾಮಾಜಿಕ ಕಾರ್ಯಕ್ರಮದ ಅಂಗವಾಗಿ ಈ ಅಭಿಯಾನವನ್ನು ಕೈಗೆತ್ತಿಕೊಂಡಿತು. ರವಿವಾರ ಸಂಜೆ ಸ್ಥಳಕ್ಕಾಗಮಿಸಿದ ತಂಡದ ಸದಸ್ಯರು ಬಸ್ ನಿಲ್ದಾಣದ ಸುತ್ತಮುತ್ತ ಜಾಲದಂತೆ ಬೆಳೆದಿದ್ದ ಗಿಡಗಂಟಿಗಳನ್ನು ಕತ್ತರಿಸಿ, ಕಸ ಗುಡಿಸಿ, ಸಂಗ್ರಹಗೊಂಡಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿದರು. ಈ ಮೂಲಕ ಹಾಳಾಗಿದ್ದ ಬಸ್ ತಂಗುದಾಣಕ್ಕೆ ಹೊಸ ರೂಪ ನೀಡಿ ಪ್ರಯಾಣಿಕರು ಕುಳಿತುಕೊಳ್ಳಲು ಯೋಗ್ಯವಾದ ವಾತಾವರಣವನ್ನು ನಿರ್ಮಿಸಿಕೊಟ್ಟಿದ್ದಾರೆ.
ಈ ಮಾದರಿ ಸ್ವಚ್ಛತಾ ಅಭಿಯಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ 'ಮೀಡಿಯಾ ಮನಸುಗಳು' ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಶಿವು ಕುಲಾಲ್, ಸಂದೇಶ್ ಶೆಟ್ಟಿ ಹಾಗೂ ಅನೂಪ್ ಸೂರಿಂಜೆ ಸಕ್ರಿಯವಾಗಿ ಭಾಗವಹಿಸಿದ್ದರು. ಪತ್ರಕರ್ತರ ಈ ಸಾಮಾಜಿಕ ಕಾಳಜಿ ಮತ್ತು ಶ್ರಮದಾನದ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರಿಂದ ಹಾಗೂ ಪ್ರಯಾಣಿಕರಿಂದ ವ್ಯಾಪಕ ಶ್ಲಾಘನೆ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ.