image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ: ಸಾಲು ಸಾಲು ರಜೆಯ ಹಿನ್ನೆಲೆ ಕ್ಷೇತ್ರದಲ್ಲಿ ನೆರೆದ ಜನಸ್ತೋಮ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ: ಸಾಲು ಸಾಲು ರಜೆಯ ಹಿನ್ನೆಲೆ ಕ್ಷೇತ್ರದಲ್ಲಿ ನೆರೆದ ಜನಸ್ತೋಮ

ಸುಬ್ರಹ್ಮಣ್ಯ: ದಸರಾ ರಜೆ ಮುಗಿದು ಶಾಲಾ-ಕಾಲೇಜುಗಳು ಪುನರಾರಂಭಗೊಂಡಿದ್ದರೂ, ವಾರಾಂತ್ಯದ ಶನಿವಾರ, ಭಾನುವಾರ ಹಾಗೂ ಸೋಮವಾರದ ವಾಲ್ಮೀಕಿ ಜಯಂತಿ ಸರ್ಕಾರಿ ರಜೆ ಒಂದಾಗಿ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದಾರೆ.

ಶನಿವಾರ ಸಂಜೆಯಿಂದಲೇ ಧಾರ್ಮಿಕ ಕ್ಷೇತ್ರಕ್ಕೆ ತಂಡೋಪತಂಡವಾಗಿ ಹರಿದುಬಂದ ಭಕ್ತಾದಿಗಳು ಶ್ರೀ ದೇವಳದ ವಸತಿ ಗೃಹಗಳು ಹಾಗೂ ಖಾಸಗಿ ವಸತಿನಿಲಯಗಳಲ್ಲಿ ವಾಸ್ತವ್ಯ ಹೂಡಿದ್ದರು. ರವಿವಾರ ಬೆಳ್ಳಂಬೆಳಗ್ಗೆ ಪವಿತ್ರ ಪುಣ್ಯನದಿ ಕುಮಾರಧಾರಾದಲ್ಲಿ ತೀರ್ಥಸ್ನಾನ ಪೂರೈಸಿ, ಮುಖ್ಯರಸ್ತೆಯ ಮೂಲಕ ದೇವಳದ ಪ್ರಮುಖ ಗೋಪುರ ದಾಟಿ ಹೊರಾಂಗಣವನ್ನು ಪ್ರವೇಶಿಸಿದರು.

ಬೆಳಗಿನ ಜಾವದಿಂದಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಶ್ರೀ ದೇವರ ದರ್ಶನ ಪಡೆದು ತೀರ್ಥಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ 11 ಗಂಟೆಗೆ ತುಲಾಭಾರ ಸೇವೆ ಹಾಗೂ ವಿಶೇಷ ಅಭಿಷೇಕಗಳು ನೆರವೇರಿದವು. ಬಳಿಕ 12 ಗಂಟೆಗೆ ನಡೆಯುವ ಮಹಾಪೂಜೆಯ ಸಂದರ್ಭದಲ್ಲಿ ಭಕ್ತರ ಪ್ರವೇಶವನ್ನು ಮೇಲ್ಭಾಗದವರೆಗೆ ವಿಸ್ತರಿಸಲಾಗಿತ್ತು. ಮಹಾಪೂಜೆ ಪೂರ್ಣಗೊಳ್ಳುತ್ತಿದ್ದಂತೆಯೇ ಇಡೀ ದೇವಳದ ಹೊರಾಂಗಣ ಹಾಗೂ ರಥಬೀದಿ ಪ್ರದೇಶ ಸಂಪೂರ್ಣವಾಗಿ ಭಕ್ತರ ದಂಡಿನಿಂದ ತುಂಬಿ ತುಳುಕುತ್ತಿತ್ತು.

ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಭಕ್ತರಿಗೆ ಸುಸೂತ್ರ ದರ್ಶನ ಕಲ್ಪಿಸಲು ಶ್ರೀ ದೇವಳದ ರಕ್ಷಕ ಸಿಬ್ಬಂದಿ (ಸೆಕ್ಯೂರಿಟಿ) ಹಾಗೂ ಕಚೇರಿಯ ಎಲ್ಲ ಸಿಬ್ಬಂದಿಗಳನ್ನು ಕಾರ್ಯನಿರ್ವಹಣಾಧಿಕಾರಿಗಳು ಪೂರ್ಣಪ್ರಮಾಣದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳ ಭೋಜನ ಪ್ರಸಾದಕ್ಕಾಗಿ ದೇವಳದ ಷಣ್ಮುಖ ಪ್ರಸಾದ ಭೋಜನ ಶಾಲೆ ಹಾಗೂ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ಬಫೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ತುಂಬಿ ತುಳುಕಿದ ಪಾರ್ಕಿಂಗ್ ಪ್ರದೇಶಗಳು

ಕ್ಷೇತ್ರದ ಸುತ್ತಮುತ್ತಲ ಎಲ್ಲ ವಾಹನ ಪಾರ್ಕಿಂಗ್ ಪ್ರದೇಶಗಳು ಭಕ್ತಾದಿಗಳ वाहನಗಳಿಂದ ಭರ್ತಿಯಾಗಿದ್ದವು. ಮುಖ್ಯ ರಸ್ತೆಯ ಸವಾರಿ ಮಂಟಪ ಪಾರ್ಕಿಂಗ್ ಸ್ಥಳ, ರಥಬೀದಿಯ ಪಾರ್ಕಿಂಗ್ ಪ್ರದೇಶ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ವಿಶಾಲ ಮೈದಾನ ಹಾಗೂ ಆದಿ ಸುಬ್ರಹ್ಮಣ್ಯ ದೇವಳದ ಸುತ್ತಮುತ್ತಲಿನ ಪಾರ್ಕಿಂಗ್ ಸ್ಥಳಗಳಲ್ಲೂ ವಾಹನಗಳ ಸಾಲು ಕಂಡುಬಂತು.

Category
ಕರಾವಳಿ ತರಂಗಿಣಿ