ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53ನೇ ಬಜಾಲ್ ವಾರ್ಡ್ನ ಕಲ್ಲುರ್ಟಿ ದೈವಸ್ಥಾನದ ಬಳಿಯಿಂದ ಅಡಪರವರ ಮನೆಯ ಬದಿಯಾಗಿ ಬಜಾಲ್ಗೆ ಜೋಡಣೆಯಾಗುವ ಮುಂದುವರೆದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಭೂಮಿ ಪೂಜೆ (ಗುದ್ದಲಿ ಪೂಜೆ) ನೆರವೇರಿಸಿದರು. ಸಾರ್ವಜನಿಕರ ಸುಲಭ ಸಂಚಾರಕ್ಕೆ ಅನುಕೂಲವಾಗುವಂತೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಪ್ರಸ್ತುತ ರಾಜ್ಯ ಸರ್ಕಾರವು ಶಾಸಕರಿಗೆ ನೀಡುತ್ತಿರುವ ಅತ್ಯಲ್ಪ ಅನುದಾನದಲ್ಲೇ ಕ್ಷೇತ್ರದ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಹಾಗೂ ಸವಾಲಿದೆ. ಆದಾಗ್ಯೂ, ಸ್ಥಳೀಯ ನಾಗರಿಕರ ಸುದೀರ್ಘ ಬೇಡಿಕೆ ಹಾಗೂ ಹಿತದೃಷ್ಟಿಯನ್ನು ಪರಿಗಣಿಸಿ ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ ನೀಡಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು. ಕಾಮಗಾರಿಯು ಶೀಘ್ರವಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳ್ಳಲು ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ವಾರ್ಡಿನ ಪ್ರಮುಖ ನಾಯಕರಾದ ಚಂದ್ರಶೇಖರ್ ಬಜಾಲ್, ಕಿರಣ್ ರೈ, ಸುಕೇಶ್ ಅಳಪೆ ಸೇರಿದಂತೆ ಹಲವು ಪಕ್ಷದ ಪ್ರಮುಖರು, ವಾರ್ಡಿನ ಸಕ್ರಿಯ ಕಾರ್ಯಕರ್ತರು ಹಾಗೂ ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.