ಮಂಗಳೂರು: ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ‘ರಚನಾ’ ವತಿಯಿಂದ ನಗರದ ಹೋಟೆಲ್ ಓಷನ್ ಪರ್ಲ್ನಲ್ಲಿ ಆಯೋಜಿಸಲಾಗಿದ್ದ ಸದಸ್ಯರ ಸಮಾವೇಶದಲ್ಲಿ ‘ರಚನಾ ಟ್ರೇಡ್ ಎಕ್ಸ್ಪೋ 2027’ಕ್ಕೆ ಸಾಂಕೇತಿಕವಾಗಿ ಉದ್ಘಾಟನೆ ನೆರವೇರಿಸಲಾಯಿತು. ಉದ್ಯಮಿಗಳು, ವ್ಯಾಪಾರಸ್ಥರು ಮತ್ತು ವೃತ್ತಿಪರರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ವ್ಯವಹಾರಿಕ ಸಂಪರ್ಕ ಹಾಗೂ ಸಮುದಾಯದ ಉದ್ಯಮಶೀಲತೆಯನ್ನು ಬಲಪಡಿಸುವ ಕುರಿತು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಚನಾ ಸಂಸ್ಥೆಯ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ ಅವರು, ಹಿರಿಯರ ಅನುಭವ ಮತ್ತು ಯುವಕರ ಉತ್ಸಾಹವನ್ನು ಸಮನ್ವಯಗೊಳಿಸಿ ಸಂಘಟನೆಯನ್ನು ಬೆಳೆಸುವ ಅಗತ್ಯವಿದೆ ಎಂದರು. ಯುವ ನಾಯಕತ್ವಕ್ಕೆ ಅವಕಾಶ ಕಲ್ಪಿಸುವ ಹಾಗೂ ಎಲ್ಲರಿಗೂ ಸೂಕ್ತ ವೇದಿಕೆ ಒದಗಿಸುವ ಸಂಸ್ಥೆಯಾಗಿ ರಚನಾವನ್ನು ರೂಪಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ರಚನಾ ಟ್ರೇಡ್ ಎಕ್ಸ್ಪೋ 2027 ಫೆಬ್ರವರಿ 26, 27 ಮತ್ತು 28ರಂದು ನಡೆಯಲಿದೆ ಎಂದು ಎಕ್ಸ್ಪೋ ಸಂಚಾಲಕ ಲೆಸ್ಲಿ ರೇಗೊ ತಿಳಿಸಿದರು. ಇದು ಉದ್ಯಮಿಗಳಿಗೆ ಹೊಸ ಮಾರುಕಟ್ಟೆ ಹಾಗೂ ಪಾಲುದಾರಿಕೆಗಳನ್ನು ಕಂಡುಕೊಳ್ಳಲು ಉತ್ತಮ ಅವಕಾಶ ನೀಡಲಿದೆ ಎಂದರು. ಮೈಕಲ್ ಡಿಸೋಜಾ ಅವರು ಎಕ್ಸ್ಪೋದ ಲೋಗೋವನ್ನು ಅನಾವರಣಗೊಳಿಸಿ, ಉದ್ಯಮ ಕ್ಷೇತ್ರದ ಹೊಸ ಬೆಳವಣಿಗೆಗಳಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
ವಾಲ್ಟರ್ ನಂದಳಿಕೆ ಮಾತನಾಡಿ ಸಂಸ್ಥೆಯ ಪ್ರಥಮ ಟ್ರೇಡ್ ಫೇರ್ ಆಯೋಜನೆಯನ್ನು ಶ್ಲಾಘಿಸಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಉದ್ಯಮಿಗಳು ಹೆಚ್ಚಿನ ಗಮನ ಹರಿಸಬೇಕೆಂದು ಆಶಿಸಿದರು. ಡಿಯೋನ್ ಮೊಂತೆರೊ ಯುವಜನರು ಸ್ವದೇಶದಲ್ಲೇ ಉದ್ಯಮ ಆರಂಭಿಸಿ ದೇಶದ ಆರ್ಥಿಕತೆಗೆ ಕೊಡುಗೆ ನೀಡುವಂತೆ ಪ್ರೋತ್ಸಾಹಿಸಿದರು. ಸಮಾರಂಭದಲ್ಲಿ ಎಕ್ಸ್ಪೋ ಕರಪತ್ರ ಬಿಡುಗಡೆ ಹಾಗೂ ಕಾರುಗಳ ಸ್ಟಿಕ್ಕರ್ಗಳ ಸಾಂಕೇತಿಕ ವಿತರಣೆ ನಡೆಯಿತು. ಕಾರ್ಯದರ್ಶಿ ಅಲ್ರಾನ್ ರೊಡ್ರಿಗಸ್ ವಂದಿಸಿದ ನಂತರ ಭೋಜನ ಮತ್ತು ಸೌಹಾರ್ದ ಸಂವಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.