image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯಕ್ಷೋತ್ಸವ ಹಾಗೂ ಯಕ್ಷಗವಿಷ್ಟ ಯಕ್ಷಗಾನ ಸ್ಪರ್ಧೆಗಳಲ್ಲಿ ಆಳ್ವಾಸ್ ಧೀಂಕಿಟ ತಂಡಕ್ಕೆ ಪ್ರಥಮ ಬಹುಮಾನ

ಯಕ್ಷೋತ್ಸವ ಹಾಗೂ ಯಕ್ಷಗವಿಷ್ಟ ಯಕ್ಷಗಾನ ಸ್ಪರ್ಧೆಗಳಲ್ಲಿ ಆಳ್ವಾಸ್ ಧೀಂಕಿಟ ತಂಡಕ್ಕೆ ಪ್ರಥಮ ಬಹುಮಾನ

ಮೂಡುಬಿದಿರೆ: ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಆಯೋಜಿಸಿದ್ದ 35ನೇ ವರ್ಷದ ‘ಯಕ್ಷೋತ್ಸವ-2026’ ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ್ದ ‘ಯಕ್ಷಗವಿಷ್ಟ 2026-27’ ರಾಜ್ಯಮಟ್ಟದ ಯಕ್ಷಗಾನ ಸ್ಪರ್ಧೆಗಳಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರವು ಸತತ ಪ್ರಥಮ ಬಹುಮಾನ ಗಳಿಸಿ ಐತಿಹಾಸಿಕ ಸಾಧನೆ ಮಾಡಿದೆ. ಎಸ್‌ಡಿಎಂ ಕಾನೂನು ಕಾಲೇಜು ನಡೆಸಿದ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ಕಾಲೇಜು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಳ್ವಾಸ್ ತಂಡವು ಪ್ರಥಮ ಸ್ಥಾನದೊಂದಿಗೆ 15,000 ರೂಪಾಯಿ ನಗದು ಹಾಗೂ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತು. ಈ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್‌ನ ಅಮೃತ್ ಮತ್ತು ಹಸ್ತಾ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಅಂತೆಯೇ, ನಿಟ್ಟೆ ತಾಂತ್ರಿಕ ವಿದ್ಯಾಸಂಸ್ಥೆ ಆಯೋಜಿಸಿದ್ದ ಯಕ್ಷಗವಿಷ್ಟ ಸ್ಪರ್ಧೆಯಲ್ಲಿ ಆಯ್ಕೆಯಾದ ಐದು ಪ್ರಮುಖ ತಂಡಗಳು ಸ್ಪರ್ಧಿಸಿದ್ದವು. ಇಲ್ಲೂ ಸಹ ಆಳ್ವಾಸ್ ಧೀಂಕಿಟ ತಂಡವು ಪ್ರಥಮ ಸ್ಥಾನದೊಂದಿಗೆ 20,000 ರೂಪಾಯಿ ನಗದು ಬಹುಮಾನ ಹಾಗೂ ಪರ್ಯಾಯ ಫಲಕವನ್ನು ಗೌರವಪೂರ್ವಕವಾಗಿ ಪಡೆದುಕೊಂಡಿದೆ. ಈ ವೇದಿಕೆಯ ವೈಯಕ್ತಿಕ ವಿಭಾಗಗಳಲ್ಲಿ ಆಳ್ವಾಸ್‌ನ ಅಮೃತ್, ಶ್ರೀನಿಧಿ, ನಿಹಾಲ್ ಹಾಗೂ ಹಸ್ತಾ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಎರಡೂ ಸ್ಪರ್ಧೆಗಳಲ್ಲಿ ಆಳ್ವಾಸ್ ತಂಡವು ಆದಿತ್ಯ ಅಂಬಲಪಾಡಿ ಹಾಗೂ ಮಯೂರ ನಾಯ್ಗ್ ಅವರ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಮೂಡಿಬಂದ ರಾಮಾಯಣದ ದಂಡಕಾರಣ್ಯದ ಸೃಷ್ಟಿಯ ಕಥಾವಸ್ತುವಿನ 'ವಿಧಿ ವಿಪರ್ಯಾಸ' ಎಂಬ ಪ್ರಸಂಗವನ್ನು ಪ್ರದರ್ಶಿಸಿ ಸಭಾಪಕ್ಷದ ಗಮನ ಸೆಳೆಯಿತು. ಕಥಾನಕದ ಪರಿಣಾಮಕಾರಿ ಅಭಿನಯ, ಸಂಭಾಷಣೆ, ನೃತ್ಯ, ರಂಗಪ್ರಸ್ತುತಿ ಮತ್ತು ಹಿಮ್ಮೇಳದ ಅದ್ಭುತ ಹೊಂದಾಣಿಕೆಯು ತೀರ್ಪುಗಾರರ ಹಾಗೂ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು. ಎರಡೂ ಪ್ರತಿಷ್ಠಿತ ವೇದಿಕೆಗಳಲ್ಲಿ ಜಯಭೇರಿ ಬಾರಿಸಿದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳನ್ನು ಮತ್ತು ಮಾರ್ಗದರ್ಶಕರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅವರು ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ