ಮಂಗಳೂರು:ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಿಲಿಕುಳದ ವಿಶಾಲ ಕೆರೆಯಲ್ಲಿ ಬೆಳೆಸಿದ ಬಲಿಷ್ಠ ಮೀನುಗಳನ್ನು ಹಿಡಿದು, ಪ್ರದರ್ಶಿಸಿ, ಸಾರ್ವಜನಿಕರಿಗೆ ಮಾರಾಟ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಭಾನುವಾರ ಪಿಲಿಕುಳದ ಕೆರೆಯಲ್ಲಿ ಬೆಳೆಸಲಾಗಿದ್ದ ಕಾಟ್ಲಾ, ರೋಹು, ಗೌರಿ, ಹಾಗೂ ತಿಲೇಪಿಯಾ ಮುಂತಾದ ತಾಜಾ ಮೀನುಗಳನ್ನು ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡುವ 'ಮತ್ಸ್ಯೋತ್ಸವ' ಹಾಗೂ 'ಮೀನು ಆಹಾರ ಮೇಳ' ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಕಾರ್ಯಕ್ರಮವನ್ನು ಮೂಲ್ಕಿ–ಮೂಡಬಿದ್ರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ಕೆರೆಗೆ ಮೀನಿನ ಮರಿಗಳನ್ನು ಬಿಡುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ಪ್ರಾಧಿಕಾರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಶಿವರಾಮ ಮಲ್ಲಿ ಮತ್ತು ಎನ್.ಜಿ. ಮೋಹನ್, ಪ್ರಾಧಿಕಾರದ ಉಪಸಮಿತಿ ಅಧ್ಯಕ್ಷರಾದ ಜಿ. ಶ್ರೀನಿಕೇತನ್ ಹಾಗೂ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ (KFDC) ಜನರಲ್ ಮ್ಯಾನೇಜರ್ ಮಹೇಶ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಆಹಾರ ಮೇಳದಲ್ಲಿ ಆಗಮಿಸಿದ ಸಾರ್ವಜನಿಕರು ಹಾಗೂ ಮೀನು ಪ್ರಿಯರು ವಿವಿಧ ನಮೂನೆಯ ಸ್ವಾದಿಷ್ಟ ಮೀನಿನ ಖಾದ್ಯಗಳನ್ನು ಸವಿದು ಆನಂದಿಸಿದರು. ದಿನವಿಡೀ ನಡೆದ ಈ ಸಂಭ್ರಮದ ಮೇಳದಲ್ಲಿ ಅಂದಾಜು 2,000ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.