ಮಂಗಳೂರು: ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಭೆಯು ಡಿಸಿಪಿ ಸ್ಯಾಮ್ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ದಲಿತ ಮುಖಂಡರು ಹಾಗೂ ಸಾರ್ವಜನಿಕರು ನಗರದ ವಿವಿಧ ಸಮಸ್ಯೆಗಳ ಕುರಿತು ಗಂಭೀರ ಆರೋಪಗಳನ್ನು ಮಾಡಿ, ಅಧಿಕಾರಿಗಳ ಗಮನ ಸೆಳೆದರು.
ಸಭೆಯಲ್ಲಿ ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್ನಲ್ಲಿ ರೋಗಿಗಳಿಗೆ ಹಾಸಿಗೆಗಳ ಲಭ್ಯತೆಯ ಬಗ್ಗೆ ತೀವ್ರ ಕೊರತೆ ಮತ್ತು ಅಸ್ತವ್ಯಸ್ತತೆಯ ವಿಚಾರ ಪ್ರಸ್ತಾಪವಾಯಿತು. ಬ್ರೇನ್ ಟ್ಯೂಮರ್ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾದ ರೋಗಿಗೆ ಹಾಸಿಗೆ ಖಾಲಿ ಇಲ್ಲ ಎಂದು ಗಂಟೆಗಟ್ಟಲೆ ಕಾಯಿಸಲಾಗಿದ್ದು, ಅಲ್ಲಿದ್ದ ವೈದ್ಯರು "ಇದು ಲಾಡ್ಜ್ ಅಲ್ಲ" ಎಂದು ಉಡಾಫೆಯಿಂದ ಮಾತನಾಡಿದ್ದಾರೆ ಎಂದು ಆದಿ ದ್ರಾವಿದ ಸಂಘದ ಮುಖಂಡರಾದ ವಿಶ್ವನಾಥ್ ಬಂಟ್ವಾಳ ದೂರಿದರು. ಬಳಿಕ ಉಸ್ತುವಾರಿ ಸಚಿವರ ಆಪ್ತರ ಮೂಲಕ ವಿನಂತಿಸಿಕೊಂಡು ಆಸ್ಪತ್ರೆಯ ಅಧೀಕ್ಷಕರ ಮುಖಾಂತರ ದಾಖಲಿಸಿಕೊಳ್ಳುವವರೆಗೆ ಸುಮಾರು ಐದು ಗಂಟೆಗಳ ಕಾಲ ರೋಗಿಯನ್ನು ಕಾಯಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೆನ್ಲಾಕ್ ಆಸ್ಪತ್ರೆಯಲ್ಲಿ ನಿವೃತ್ತ ಪೌರ ಕಾರ್ಮಿಕರಿಗೂ ಬೆಡ್ ಇಲ್ಲ ಎಂದು ಹೇಳಿ ದಿನಕ್ಕೆ 50,000 ರೂ. ವೆಚ್ಚದ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತಹ ಪ್ರಕರಣಗಳು ನಡೆಯುತ್ತಿವೆ ಎಂದು ದಲಿತ ಮುಖಂಡ ಅನಿಲ್ ಕಂಕನಾಡಿ ಆರೋಪಿಸಿದರು. ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆಗಳ ಲಭ್ಯತೆಯ ಬಗ್ಗೆ ಹಾಗೂ ಖಾಸಗಿ ಆಸ್ಪತ್ರೆಗಳ ದರ ಪಟ್ಟಿ ಪ್ರಕಟಿಸಲು ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ದಲಿತ ಮುಖಂಡರಾದ ಎಸ್.ಪಿ. ಆನಂದ್ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಡಿಸಿಪಿ ಸ್ಯಾಮ್ ವರ್ಗೀಸ್, ವೆನ್ಲಾಕ್ನಲ್ಲಿ ಐಸಿಯು ಸೇರಿದಂತೆ ಹಾಸಿಗೆಗಳ ಲಭ್ಯತೆ ಕುರಿತು ಸೂಚನಾ ಫಲಕ ಅಳವಡಿಸಲು ಆಸ್ಪತ್ರೆಯ ಮುಖ್ಯಸ್ಥರಿಗೆ ಸಲಹೆ ನೀಡುವುದಾಗಿ ಭರವಸೆ ನೀಡಿದರು.
ಇದರೊಂದಿಗೆ, ಸುರತ್ಕಲ್ನ ವೆಂಕಟೇಶ್ ಎಂಬುವವರು ಮುದ್ರಾ ಲೋನ್ಗಾಗಿ ಕಳೆದ 9 ತಿಂಗಳಿಂದ ಅಲೆದಾಡುತ್ತಿರುವ ಸಮಸ್ಯೆಯನ್ನು ಸಭೆಯ ಮುಂದಿಡಲಾಯಿತು. ರಾಷ್ಟ್ರೀಕೃತ ಬ್ಯಾಂಕೊಂದರ ಬಿಜೈ ಶಾಖೆಯ ಮ್ಯಾನೇಜರ್ ಸೂಚನೆಯಂತೆ ಶೇ. 20ರಷ್ಟು ಹಣವನ್ನು ಮುಂಚಿತವಾಗಿ ಕ್ರೋಢೀಕರಿಸಿ 2 ಲಕ್ಷ ರೂ. ಬಡ್ಡಿಯಲ್ಲಿ ಸಾಲ ಪಡೆದು ಎಂಬ್ರಾಯ್ಡರಿ ಮತ್ತು ಮ್ಯಾಚಿಂಗ್ ಸ್ವ ಉದ್ಯೋಗ ಘಟಕವನ್ನು ಆರಂಭಿಸಿದ್ದರೂ, ಸಾಲ ಇನ್ನೂ ಮಂಜೂರಾಗಿಲ್ಲ ಹಾಗೂ ಮ್ಯಾನೇಜರ್ ಸಾಲ ಮರುಪಾವತಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿ ಸೂಕ್ತ ತನಿಖೆ ನಡೆಸಿ ದಂಪತಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಯಿತು.
ಹಾಗೆಯೇ, ಲೇಡಿಗೋಶನ್ ಆಸ್ಪತ್ರೆಯ ಎದುರು ಸುಮಾರು 20ಕ್ಕೂ ಹೆಚ್ಚು ಗೂಡಂಗಡಿಗಳು ಫೂಟ್ಪಾತ್ ಮತ್ತು ರಸ್ತೆಯನ್ನೇ ಆಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಪೌರ ಕಾರ್ಮಿಕರಿಗೆ ಸ್ವಚ್ಛತಾ ಕಾರ್ಯ ಮಾಡಲು ಮತ್ತು ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ದೂರಿಗೆ, ಈ ಬಗ್ಗೆ ಕೂಡಲೇ ಕ್ರಮ ವಹಿಸುವುದಾಗಿ ಡಿಸಿಪಿ ತಿಳಿಸಿದರು. ನಗರದಲ್ಲಿ ಕಳೆದ 15 ವರ್ಷಗಳಿಂದ ಅಂಬೇಡ್ಕರ್ ವೃತ್ತ (ಸರ್ಕಲ್) ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಚಿಂತನೆಯೇ ಇಲ್ಲ ಎಂದು ದಲಿತ ಮುಖಂಡ ಚಂದ್ರಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಡಿಸಿಪಿ ಸ್ಯಾಮ್ ವರ್ಗೀಸ್, ಈ ಬಗ್ಗೆ ಪರಿಶೀಲನಾ ಸಮಿತಿ ರಚಿಸಲಾಗಿದ್ದು, ಮುಂದಿನ ತಿಂಗಳುಗಳೊಳಗೆ ಜಿಲ್ಲಾಧಿಕಾರಿಗೆ ಸಲ್ಲಿಸುವ ವರದಿಯ ವಿಚಾರ ತಿಳಿಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಡಿಸಿಪಿ ರವಿಶಂಕರ್, ಡಿಸಿಐಆರ್ ವಿಭಾಗದ ಎಸಿಪಿ ಸೈಮನ್ ಉಪಸ್ಥಿತರಿದ್ದು, ಎಸಿಪಿ ವಿಜಯ್ ಕ್ರಾಂತಿ ಸ್ವಾಗತಿಸಿ, ಹಿಂದಿನ ಸಭೆಯ ನಡಾವಳಿ ವಿವರಗಳನ್ನು ಮಂಡಿಸಿದರು.