ಧರ್ಮಸ್ಥಳ : ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶನಿವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದ ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ರಾಘವೇಂದ್ರ ಶ್ರೀನಿವಾಸ ಭಟ್ ಅವರು, ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಗೆ ಅನುಗುಣವಾಗಿ ಅನ್ನದಾನ, ವಿದ್ಯಾದಾನ, ಅಭಯದಾನ ಹಾಗೂ ಔಷಧದಾನ ಎಂಬ ಚತುರ್ವಿಧ ದಾನ ಪರಂಪರೆಯನ್ನು ಬೆಳೆಸಿಕೊಂಡು ನಿಸ್ವಾರ್ಥ ಮನೋಭಾವದಿಂದ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಸೇವೆಯಲ್ಲಿ ತೊಡಗಿರುವ ಹೆಗ್ಗಡೆಯವರ ಸಾಧನೆ ಮತ್ತು ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ ಎಂದರು. ಧರ್ಮದ ತಳಹದಿಯಲ್ಲಿ ಮಹಿಳಾ ಸಬಲೀಕರಣ ಹಾಗೂ ಅಸಹಾಯಕರಿಗೆ ಅಭಯ ನೀಡುತ್ತಿರುವ ಅವರಿಗೆ 'ರಾಜರ್ಷಿ' ಬಿರುದು ಅತ್ಯಂತ ಅನ್ವರ್ಥಕವೂ ಅರ್ಥಪೂರ್ಣವೂ ಆಗಿದೆ ಎಂದು ಬಣ್ಣಿಸಿದರು.
ಇದೇ ವೇಳೆ, ಧರ್ಮಸ್ಥಳ ಹಾಗೂ ಕರ್ಣಾಟಕ ಬ್ಯಾಂಕ್ ನಡುವಿನ ಅವಿನಾಭಾವ ಬಾಂಧವ್ಯವನ್ನು ಸ್ಮರಿಸಿದ ರಾಘವೇಂದ್ರ ಭಟ್, ಹೆಗ್ಗಡೆಯವರು ಮತ್ತು ಅವರ ಸಹೋದರರಾದ ಡಿ. ಸುರೇಂದ್ರ ಕುಮಾರ್ ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರು ಬ್ಯಾಂಕ್ನ ನಿರ್ದೇಶಕರಾಗಿ ನೀಡಿದ ಕೊಡುಗೆಯನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು. ಸಮಾರಂಭದಲ್ಲಿ ಶುಭಾಶಂಸನೆ ಕೋರಿದ ವಿಧಾನಪರಿಷತ್ನ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ರಾಜಯೋಗಿಯಾಗಿಯೂ ಕರ್ಮಯೋಗಿಯಾಗಿಯೂ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಹೆಗ್ಗಡೆಯವರ ಕೊಡುಗೆಗೆ ಉಪಕಾರಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಹೊಸನೆಲ ಎಸ್ಟೇಟ್ನ ಪ್ರಬಂಧಕ ಶ್ರೀವರ್ಮ ಸೇರಿದಂತೆ ಒಟ್ಟು 26 ಮಂದಿ ಹಿರಿಯ ನೌಕರರನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗೌರವಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಡಾ. ಪವನ್ ಅವರು ರಚಿಸಿದ “ಮುಹೂರ್ತ ಪದವೀ” ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಶುಭ ಸಮಾಚಾರವನ್ನು ಹಂಚಿಕೊಂಡ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಲವಾರು ಹೊಸ ಜನಪರ ಯೋಜನೆಗಳನ್ನು ಪ್ರಕಟಿಸಿದರು.
1. ಶ್ರವಣಬೆಳಗೊಳದಲ್ಲಿ ನೂತನವಾಗಿ ವಿದ್ಯಾರ್ಥಿನಿ ನಿಲಯ ನಿರ್ಮಾಣ.
2. ಉಜಿರೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಕ್ರೀಡಾವಸತಿ ನಿಲಯ ಸ್ಥಾಪನೆ.
3. ಉಜಿರೆಯಲ್ಲಿ ನೂತನ ನರ್ಸಿಂಗ್ ಕಾಲೇಜು ಮತ್ತು ಫಿಸಿಯೋಥೆರಪಿ ಕಾಲೇಜುಗಳ ಪ್ರಾರಂಭ.
4. ವಿವಿಧ ಶಿಕ್ಷಣ ಸಂಸ್ಥೆಗಳ ಹಳೇಕಟ್ಟಡಗಳ ನವೀಕರಣ.
5. ಉಜಿರೆಯಲ್ಲಿ ಆಧುನಿಕ ಸಿಂಥೆಟಿಕ್ ಟ್ರಾಕ್ ನಿರ್ಮಾಣ.
6. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಎ.ಟಿ.ಎಂ. ಸೌಲಭ್ಯ.
7. ಉಜಿರೆ ಆಸ್ಪತ್ರೆಯಲ್ಲಿ ಉಚಿತ/ಸವಲತ್ತು ಸಹಿತ ಡಯಾಲಿಸಿಸ್ ಸೇವೆ ಒದಗಿಸುವುದು.
8. ವಿವಿಧ ಪ್ರದೇಶಗಳಲ್ಲಿ ಕೆರೆಗಳ ಪುನಶ್ಚೇತನ ಕಾರ್ಯವನ್ನು ಮುಂದುವರಿಸುವುದು.
9. ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆಯ ಸಹಯೋಗದೊಂದಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಸುಮಾರು 11.00 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ (Cath Lab) ಸೌಲಭ್ಯ ಪ್ರಾರಂಭ. ಈ ಮೂಲಕ ಆಂಜಿಯೋಗ್ರಾಮ್ ಹಾಗೂ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿವೆ.
ಇದರೊಂದಿಗೆ ಭಾನುವಾರ ಮತ್ತು ಸೋಮವಾರಗಳಲ್ಲಿ ಧರ್ಮಸ್ಥಳಕ್ಕೆ ಬಂದು ಚಿಕಿತ್ಸೆಗಾಗಿ ನೆರವು ಕೋರುವ ಸಂಕಷ್ಟದಲ್ಲಿರುವವರಿಗೆ ಸೂಕ್ತ ವೈದ್ಯಕೀಯ ಸಹಾಯ ನೀಡಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು. ಉಡುಪಿ, ಹಾಸನ, ಬೆಂಗಳೂರಿನ ಆಯುರ್ವೇದ ಆಸ್ಪತ್ರೆಗಳು ಹಾಗೂ ಧರ್ಮಸ್ಥಳ, ಪರೀಕ, ಬೆಂಗಳೂರಿನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳ ಮೂಲಕ ಪಾರಂಪರಿಕ ಚಿಕಿತ್ಸಾ ಪದ್ಧತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಡಿ. ಶ್ರೇಯಸ್ ಕುಮಾರ್ ಹಾಗೂ ಮೂಡಬಿದ್ರೆಯ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು. ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ ಸ್ವಾಗತಿಸಿದರು, ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ಧನ್ಯವಾದ ಸಲ್ಲಿಸಿದರು. ಪದ್ಮಶ್ರೀ ಆರ್. ಜೈನ್ ಮತ್ತು ದಿವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.