ಮಂಗಳೂರು : ತನ್ನ ಕಲಾ ಶಿಸ್ತು ಹಾಗೂ ನೈಪುಣ್ಯತೆ ಮೂಲಕ ಬಂಟ್ವಾಳ ಜಯರಾಮ ಆಚಾರ್ಯ ಅವರು ಯಕ್ಷಗಾನದ ಹಾಸ್ಯ ಪಾತ್ರಕ್ಕೆ ಗೌರವ ತಂದವರು, ಸ್ವಾಭಿಮಾನಿಯಾಗಿದ್ದ ಜಯರಾಮ ಆಚಾರ್ಯ ಅವರ ಕುಟುಂಬದ ಜೊತೆಗೆ ಅಭಿಮಾನಿಗಳು ನಿಲ್ಲುವ ಅವಶ್ಯಕತೆ ಇದೆ ಎಂದು ಹಿರಿಯ ಯಕ್ಷಗಾನ ವಿಮರ್ಶಕ ಡಾ.ಪ್ರಭಾಕರ ಜೋಶಿ ಅವರು ಹೇಳಿದರು.ಅವರು ಮಂಗಳೂರಿನ ಉರ್ವಾಸ್ಟೋರ್ ನ ತುಳು ಅಕಾಡೆಮಿಯ ತುಳು ಭವನದಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಜಯರಾಮ ಆಚಾರ್ಯ ಅತ್ಯಂತ ಸೂಕ್ಷ್ಮ ಪ್ರಜ್ಞೆಯ ಪಾಂಡಿತ್ಯಪೂರ್ಣ ಕಲಾವಿದರಾಗಿದ್ದರು,ಹಿರಿಯ ಪರಂಪರೆಯ ಶ್ರೇಷ್ಠ ಹಾಸ್ಯ ಕಲಾವಿದರ ಸಾಲಿನಲ್ಲಿ ಆಚಾರ್ಯರಿಗೆ ಸ್ಥಾನವಿತ್ತು ಎಂದು ಪ್ರಭಾಕರ ಜೋಷಿ ಬಣ್ಣಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಅತ್ಯಂತ ಸಜ್ಜನ ಹಾಗೂ ಸ್ವಾಭಿಮಾನಿ ಕಲಾವಿದ ಜಯರಾಮ ಆಚಾರ್ಯ ಅವರ ಹೆಸರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿಗೆ ಸೇರ್ಪಡೆಯಾಗಿತ್ತು ಎಂದು ಉಲ್ಲೇಖಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ಜಯರಾಮ ಆಚಾರ್ಯ ಅವರ ಕಲಾ ಶಿಸ್ತು ಹಾಗೂ ಸ್ವಾಭಿಮಾನದ ಬದುಕನ್ನು ಕಲಾರಂಗ ಸದಾ ಸ್ಮರಿಸಲಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅವರು ಮಾತನಾಡಿ, ಜಯರಾಮ ಆಚಾರ್ಯ ಅವರೊಂದಿಗೆ ತನಗೆ ಸುಧೀರ್ಘ ಕಾಲದ ಒಡನಾಟವಿತ್ತು,ಜೊತೆಯಾಗಿ ವೇಷ ಮಾಡುತ್ತಿದ್ದೇವು, ಆದರೆ ಕಲಾವಿದರ ಪೈಕಿ ಜಯರಾಮ ಆಚಾರ್ಯರು ಅತ್ಯಂತ ಭಿನ್ನ ರೀತಿಯವರು ಅವರದೊಂದು ವಿಶಿಷ್ಟವಾದ ವ್ಯಕ್ತಿತ್ವ ಎಂದು ಗುಣಗಾಣ ಮಾಡಿದರು. ಖ್ಯಾತ ನಟ ಅರವಿಂದ ಬೋಳಾರ್ ಅವರು ಮಾತನಾಡಿ, ತನಗಿಂತ ಕಿರಿಯ ಕಲಾವಿದರಿಗೆ ಗೌರವ ನೀಡುವ ಹಾಗೂ ಸೂಕ್ತ ಮಾರ್ಗದರ್ಶನ ಮಾಡುವಂತ ಔದಾರ್ಯ ಗುಣ ಅವರಲ್ಲಿತ್ತು, ತಾನು ಅನೇಕ ಬಾರಿ ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದೆ ಎಂದು ನೆನಪಿಸಿದರು.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಉಪಾಧ್ಯಕ್ಷ ಪುರುಷೋತ್ತಮ ಭಂಡಾರಿ ಅವರು ಮಾತನಾಡಿ, ಜಯರಾಮ ಆಚಾರ್ಯ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಬಗ್ಗೆ ಕಲಾಭಿಮಾನಿಗಳಿಗೆ ಅರಿವು ಇದೆ, ಪಟ್ಲ ಫೌಂಡೇಶನ್ ಹಾಗೂ ಕಲಾ ಸಂಘಟನೆಗಳು ಅವರ ಕುಟುಂಬಕ್ಕೆ ಆಧಾರಸ್ಥಂಭ ನಿಲ್ಲಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ತುಳು ನಾಟಕ ಕಲಾವಿರ ಒಕ್ಕೂಟದ ಉಪಾಧ್ಯಕ್ಷ ಪ್ರದೀಪ್ ಆಳ್ವಾ ಅವರು ಮಾತನಾಡಿ, ತುಳು ನಾಟಕ ಹಾಗೂ ಸಿನಿಮಾ ರಂಗದಲ್ಲಿ ಯೂ ಜಯರಾಮ ಆಚಾರ್ಯರ ಸೇವೆ ಅನನ್ಯವಾದುದು, ತನ್ನ ಕಷ್ಟ ನೋವನ್ನು ಅವರೆಂದೂ ಯಾರ ಮುಂದೆಯೂ ಹೇಳಿಕೊಂಡವರಲ್ಲ ಎಂದು ಹೇಳಿದರು. ಒಕ್ಕೂಟದ ವತಿಯಿಂದಲೂ ಅವರ ಕುಟುಂಬಕ್ಕೆ ನೆರವು ನೀಡಲಾಗುವುದೆಂದು ಹೇಳಿದರು.
ಹಿರಿಯ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ ಜಯರಾಮ ಆಚಾರ್ಯ ಅವರು ನಿಜವಾದ ವಿದೂಷಕರಾಗಿದ್ದರು, ಹಾಸ್ಯ ಪಾತ್ರವನ್ನು ಮೀರಿ ರಾಜ ವೇಷಕ್ಕೆ ಪೋಷಣೆ ಮಾಡುವ ವಿದೂಷಕರಾಗಿದ್ದರು ಎಂದು ಅಭಿಪ್ರಾಯಪಟ್ಟರು.
ಜಯರಾಮ ಆಚಾರ್ಯ ಅವರ ಸಹೋದರ ನಾರಾಯಣ ಆಚಾರ್ಯ ಅವರು ಮಾತನಾಡಿ, ತನ್ನ ಅಣ್ಣ ಅತ್ಯಂತ ಸ್ವಾಭಿಮಾನಿ, ಎಷ್ಟು ಕಷ್ಟ ಇದ್ದರೂ ಯಾರ ಮುಂದೆಯೂ ಹೇಳಿಕೊಳ್ಳುತ್ತಿರಲಿಲ್ಲ, ತನ್ನ ಸಂಪಾದನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ,ಕುಟುಂಬಕ್ಕೆ ಆಧಾರವಾಗಿ ನಿಂತವರು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ನಾವು ಕೇಳಿಕೊಂಡಾಗಲೆಲ್ಲಾ ಈ ಒಂದು ವರ್ಷ ಮೇಳದ ತಿರುಗಾಟಕ್ಕೆ ಹೋಗಿ ಮುಂದಿನ ವರ್ಷ ನಿವೃತ್ತನಾಗುವೆ ಎಂದು ಹೇಳುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಅವರು ಮಾತನಾಡಿ, ಜಯರಾಮ ಆಚಾರ್ಯ ಅವರು ನಯ ವಿನಯತೆಯ ಸಜ್ಜನಿಕೆಯ ಕಲಾವಿದರಾಗಿದ್ದರು ಎಂದು ಬಣ್ಣಿಸಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷ ಧ್ರವ ಪಟ್ಲ ಫೌಂಡೇಶನ್ ಟ್ರಸ್ಟ್, ತುಳು ನಾಟಕ ಕಲಾವಿದರ ಒಕ್ಕೂಟ ಆಯೋಜಿಸಿತ್ತು.
ಸಭೆಯಲ್ಲಿ ಜಯರಾಮ ಆಚಾರ್ಯರ ಪುತ್ರ ವರಣ್ ಆಚಾರ್ಯ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ , ಯಕ್ಷ ಧ್ರುವ ಪಟ್ಲ ಪೌಂಢೇಶನ್ ಉಪಾಧ್ಯಕ್ಷ ಜಯಶೀಲ ಅಡ್ಯಂತಾಯ , ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ್, ನಟ ಲಕ್ಷ್ಮಣ್ ಕುಮಾರ್ ಮಲ್ಲೂರು ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮ, ತುಳು ಅಕಾಡೆಮಿ ಸದಸ್ಯರಾದ, ಸಂತೋಷ್ ಶೆಟ್ಟಿ, ಮೋಹನ್ ದಾಸ್ ಕೊಟ್ಟಾರಿ, ರೋಹಿತ್ ಉಳ್ಳಾಲ್, ಯಕ್ಷಗಾನ ಅಕಾಡೆಮಿ ಸದಸ್ಯರಾದ ಮೋಹನ್ ಕೊಪ್ಪಳ, ಜಿ.ವಿ.ಎಸ್.ಉಳ್ಳಾಲ್, ತುಳು ಅಕಾಡೆಮಿ ಮಾಜಿ ಸದಸ್ಯರಾದ ಬಾಳ ಜಗನ್ನಾಥ ಶೆಟ್ಟಿ, ಬೆನೆಟ್ ಅಮ್ಮನ್ನ ಮೊದಲಾದವರು ಉಪ್ಥಿತರಿದ್ದರು. ತುಳು ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.