ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ವತಿಯಿಂದ ದೆರಳಕಟ್ಟೆಯ ಇನ್ಲ್ಯಾಂಡ್ ಕ್ಯಾಂಪಸ್ನಲ್ಲಿ ಅಕ್ಟೋಬರ್ 27 ಮತ್ತು 28ರಂದು ಎರಡು ದಿನಗಳ ಕಾಲ ರಾಷ್ಟ್ರೀಯ ಮಟ್ಟದ "ಪ್ರೇರಣಾ ವಿಜ್ಞಾನೋತ್ಸವ 2026" (ಸೈನ್ಸ್ ಫೆಸ್ಟ್ 2026) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ವಿಜ್ಞಾನೋತ್ಸವವು "ಕುತೂಹಲ ಮತ್ತು ಆವಿಷ್ಕಾರದ ಸಂಗಮ" (Where Curiosity Meets Discovery) ಎಂಬ ಶೀರ್ಷಿಕೆಯಡಿ ನಡೆಯಲಿದ್ದು, ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಕುತೂಹಲ, ಸೃಜನಶೀಲತೆ, ಸಂಶೋಧನೆ ಮತ್ತು ತಾಂತ್ರಿಕ ಜ್ಞಾನವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಫಾದರ್ ಮುಲ್ಲರ್ ಹೋಮಿಯೋಪತಿಕ್ ಫಾರ್ಮಸಿ ವಿಭಾಗಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ 50ಕ್ಕೂ ಹೆಚ್ಚು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ 4,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಅಕ್ಟೋಬರ್ 27ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಂದನೀಯ ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ ವಹಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್. ಆರ್. ತಿಮ್ಮಯ್ಯ ಮುಖ್ಯ ಅತಿಥಿಗಳಾಗಿ ಹಾಗೂ ಮಂಗಳೂರಿನ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಕಾರ್ಯದರ್ಶಿ ವಂದನೀಯ ಡಾ. ಪ್ರವೀಣ್ ಲಿಯೋ ಲಾಸ್ರಾದೊ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 28ರಂದು ಸಂಜೆ 4:00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಆಂಜಲ್ ಎಸ್ಎಮ್ ವಿನ್ಸೆಂಟ್ ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ಫಾದರ್ ರೋಹನ್ ಡಯಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ ಚಿಂತನೆ ಹಾಗೂ ಆವಿಷ್ಕಾರಗಳನ್ನು ಪ್ರದರ್ಶಿಸಲು ಮಾದರಿ ಪ್ರದರ್ಶನಗಳು, 'ಒಂದು ನಿಮಿಷದ ವಿಜ್ಞಾನ', ವಿಜ್ಞಾನ ಪ್ರಬಂಧ ರಸಪ್ರಶ್ನೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ಮಾದರಿ ತಯಾರಿಕೆ, ಫೋರೆನ್ಸಿಕ್ ಸ್ಪರ್ಧೆ ಮತ್ತು ಬ್ಯಾಟರಿಯಿಂದ ಚಲಿಸುವ ಕಾರು ತಯಾರಿಕೆ ಸೇರಿದಂತೆ ವಿವಿಧ ವಿಜ್ಞಾನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಒಟ್ಟು 1,50,000 ರೂಪಾಯಿ ಮೌಲ್ಯದ ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರದ ಜ್ಞಾನಕ್ಕಾಗಿ ಮೂಲಭೂತ ಜೀವ ರಕ್ಷಣಾ ವಿಧಾನಗಳು (CPR), ಪ್ರಥಮ ಚಿಕಿತ್ಸೆ, ಪಿಎಚ್ ಪರೀಕ್ಷೆ ಮುಂತಾದ 4 ಪ್ರತ್ಯೇಕ ಪ್ರಾಯೋಗಿಕ ತರಬೇತಿ ಕೇಂದ್ರಗಳನ್ನು (ಹ್ಯಾಂಡ್ಸ್-ಆನ್ ಟ್ರೈನಿಂಗ್ ಸ್ಟೇಷನ್) ಕಲ್ಪಿಸಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತಾಧಿಕಾರಿಗಳಾದ ವಂದನೀಯ ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ, ವಂದನೀಯ ಫಾ. ನೆಲ್ಸನ್ ಧೀರಜ್ ಪಾಯಿಸ್, ಪ್ರಾಂಶುಪಾಲರಾದ ಡಾ. ಪ್ರಭು ಕಿರಣ್, ಡಾ. ಸತೀಶ್ ರಾವ್, ಡಾ. ಗಿರೀಶ್ ನಾವಡ, ಡಾ. ದೀಪಾ ಪಾಯಿಸ್ ಹಾಗೂ ಸಂಯೋಜಕರಾದ ಶ್ರೀಮತಿ ನಿಖಿತಾ, ಡಾ. ಧೀರಜ್ ಫರ್ನಾಂಡಿಸ್ ಮತ್ತು ಡಾ. ಶ್ರೇಯಾ ಕೋಟ್ಯಾನ್ ಉಪಸ್ಥಿತರಿದ್ದರು.