image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ನೂತನ ತುಳು ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ

ಮಂಗಳೂರಿನಲ್ಲಿ ನೂತನ ತುಳು ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ

ಮಂಗಳೂರು : ಸಾಮಾಜಿಕ ಸೇವಕ ಹಾಗೂ ಉದ್ಯಮಿ, ಲೋಬೋ ಫೌಂಡೇಶನ್ ಮೂಲಕ ವಿವಿಧ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಜಾನ್ ವಿಲ್ಸನ್ ಲೋಬೋ, ತಮ್ಮ ಲೋಬೋ ಪ್ರೊಡಕ್ಷನ್ ಹಾಗೂ ಸೋನುಲವಿ ಸಿನಿ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸುತ್ತಿರುವ ನೂತನ ತುಳು ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮವು ಅಕ್ಟೋಬರ್ 26ರಂದು ಮಂಗಳೂರಿನ ಬಲ್ಮಠದ ಡಾನ್ ಬಾಸ್ಕೊ ಹಾಲ್‌ನಲ್ಲಿ ಸಂಜೆ ನಡೆಯಲಿದೆ ಎಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಪತ್ರಕರ್ತ ನರೇಂದ್ರ ಕೆರೆಕಾಡು ಹೇಳಿದರು. ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆಯಲಿರುವ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ನೆರವೇರಿಸಲಿದ್ದಾರೆ ಎಂದು ತಿಳಿಸಿದರು. ಧರ್ಮಗುರು ರೆ.ಫಾ. ಆಂಡ್ರೋ ಲಿಯೋ ಡಿ'ಸೋಜಾ ಅವರು ಆಶೀರ್ವಚನ ನೀಡಲಿದ್ದು, ಲೋಬೋ ಪ್ರೊಡಕ್ಷನ್ಸ್ ಮಾಲಕ ಜಾನ್ ವಿಲ್ಸನ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಶೂಟಿಂಗ್ ಕ್ಲ್ಯಾಪ್ ಹಸ್ತಾಂತರ ಮಾಡಲಿದ್ದು, ಪತ್ರಕರ್ತ ವಾಲ್ಟರ್ ನಂದಳಿಕೆ ಅವರು ಕ್ಯಾಮರಾ ಚಾಲನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.

ಜಾನ್ ವಿಲ್ಸನ್ ಲೋಬೋ ಅವರು ಈಗಾಗಲೇ 'ವೇಳ್ ಡಿ' ಎಂಬ ಕೊಂಕಣಿ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು, ಇದೀಗ ತಮ್ಮದೇ ಬ್ಯಾನರ್ ಮೂಲಕ ಪ್ರಥಮವಾಗಿ ತುಳು ಭಾಷೆಯ ಸಿನಿಮಾವನ್ನು ನಿರ್ಮಿಸುವ ಯೋಜನೆ ರೂಪಿಸಿದ್ದಾರೆ. ಈ ಮೂಲಕ ತುಳುನಾಡಿನ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ಕಥೆಗೆ ತಕ್ಕಂತೆ ಸೀಮಿತ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, 2027ರಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಲಾಯಿತು. ಚಿತ್ರದ ನಿರ್ದೇಶಕ ದೇವಿಪ್ರಸಾದ್ ಎಸ್. ಮಾತನಾಡಿ, ಗ್ರಾಮೀಣ ಭಾಗದ ತುಳು ರಂಗಭೂಮಿಯಲ್ಲಿನ ಆಗು-ಹೋಗುಗಳಿಗೆ ಕಥೆಯ ರೂಪ ನೀಡಿ, ನವಿರಾದ ಹಾಸ್ಯದೊಂದಿಗೆ ಸಂದೇಶಭರಿತ ಸಿನಿಮಾವನ್ನು ತಯಾರಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾವಾಗಲಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ರೋಶನ್ ನೆಲ್ಲಿಗುಡ್ಡೆ, ಸುನಿಲ್ ಡಿಸೋಜ ನೆಲ್ಲಿಗುಡ್ಡೆ ಹಾಗೂ ಆರಿಫ್ ಯು.ಆರ್. ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ