image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಾಂತಿಗುಡ್ಡೆ ವಾಸಿಗಳಿಗೆ ಕಶ್ಮಲದ ಭೀತಿ: ಭೂಸ್ವಾಧೀನಕ್ಕೆ ಆಗ್ರಹ

ಶಾಂತಿಗುಡ್ಡೆ ವಾಸಿಗಳಿಗೆ ಕಶ್ಮಲದ ಭೀತಿ: ಭೂಸ್ವಾಧೀನಕ್ಕೆ ಆಗ್ರಹ

ಮಂಗಳೂರು: ಬಜ್ಪೆ ಗ್ರಾಮದ ಕೈಗಾರಿಕಾ ವಲಯಕ್ಕೆ ಹೊಂದಿಕೊಂಡಿರುವ ಶಾಂತಿಗುಡ್ಡೆ ಕಾಲೋನಿಯ 105 ಮನೆಗಳ ನಿವಾಸಿಗಳು ಕಳೆದ 20 ವರ್ಷಗಳಿಂದ ಕೈಗಾರಿಕೆಗಳ ಮಾಲಿನ್ಯ ಹಾಗೂ ಅದರ ದುಷ್ಪರಿಣಾಮಗಳ ಆತಂಕದಲ್ಲಿ ಬದುಕುಳಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಂತಿಗುಡ್ಡೆ ಕಾಲೋನಿಯ ಸರ್ವೆ ನಂಬರ್ 138/1ರ ವ್ಯಾಪ್ತಿಯ ಸುಮಾರು ನಾಲ್ಕು ಎಕರೆ ಪ್ರದೇಶವನ್ನು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಿ, ಅಲ್ಲಿನ ಕುಟುಂಬಗಳ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸುತ್ತದೆ ಎಂದು 

ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಸಿರಾಜ್ ಹುಸೇನ್ ಆಗ್ರಹಿಸಿದರು. ಎಂಆರ್‌ಪಿಎಲ್‌ನ ಕೋಕ್ ಮತ್ತು ಸಲ್ಫರ್ ಘಟಕಗಳಿಂದ ಹೊರಹೊಮ್ಮುವ ಹಾರುಬೂದಿ ಹಾಗೂ ಇತರೆ ಮಾಲಿನ್ಯಕಾರಕಗಳಿಂದ ಚರ್ಮ ರೋಗ, ಕ್ಯಾನ್ಸರ್ ಮೊದಲಾದ ಆರೋಗ್ಯ ದುಷ್ಪರಿಣಾಮಗಳನ್ನು ಎದುರಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ ಎಂದರು. 2007ರಲ್ಲಿ ಕೆಐಎಡಿವಿಯಿಂದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 28/2 ಮತ್ತು 28/3ರ ಅಡಿಯಲ್ಲಿ ನೋಟೀಸ್‌ಗಳನ್ನು ಜಾರಿಗೊಳಿಸಲಾಗಿದ್ದರೂ, ಇಲ್ಲಿಯವರೆಗೆ ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಎಂಆರ್‌ಪಿಎಲ್‌ನ ಹಸಿರು ವಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಂತಿಗುಡ್ಡೆ ಪ್ರದೇಶವನ್ನು ಸೇರ್ಪಡೆಗೊಳಿಸಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು, ಸಂಸದರು, ಶಾಸಕರು, ಎಂಆರ್‌ಪಿಎಲ್, ಎಂಎಸ್‌ಐಆರ್‌ಡಿ, ಕೆಐಎಡಿಬಿ, ಪರಿಸರ ಇಲಾಖೆ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪರಿಹಾರ ದೊರೆತಿಲ್ಲವಾದರೂ, ಈಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಿದ್ದು ಉತ್ತಮ ಸ್ಪಂದನೆಯ ಭರವಸೆ ಇದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಇಸ್ಮಾಯಿಲ್, ನಿಸಾರ್, ವಸಂತ್, ಕೃಷ್ಣ ರಾಜ್, ರಫೀಕ್, ಶಿಶಿರ್ ಕುಮಾರ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ