ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ದಿ. ಮಾಧವ ಶೆಟ್ಟಿ ಮೂಡಬಿದ್ರೆ ಹಾಗೂ ದಿ. ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರ ಸಂಸ್ಮರಣಾ ಗೋಷ್ಠಿ ಮತ್ತು 'ಅಮರ ಶಿಲ್ಪಿ ವೀರ ಶಂಭು ಕಲ್ಕುಡ' ತುಳು ಯಕ್ಷಗಾನ ಪ್ರದರ್ಶನವು ಅಕ್ಟೋಬರ್ 25 ರಂದು ಮಧ್ಯಾಹ್ನ 3.15 ಕ್ಕೆ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರಿನ ಯಕ್ಷ ತುಳು ಪರ್ವ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಾಜಿ ಶಾಸಕ ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಶ್ರೀಪತಿ ಭಟ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಭಟ್, ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್, ಉದ್ಯಮಿ ದಿವಾಕರ ಖಂಡಿಗ, ಸಮಾಜ ಸೇವಕ ಶಾಂತಾರಾಮ ಕುಡ್ವ ಮೂಡಬಿದಿರೆ, ಉದ್ಯಮಿ ಸದಾಶಿವ ರಾವ್ ನೆಲ್ಲಿಮಾರ್, ಅರುಣ್ ಕುಮಾರ್ ಹಾಗೂ ಯಕ್ಷ ತುಳು ಪರ್ವದ ಅಧ್ಯಕ್ಷ ಡಿ. ಮನೋಹರ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.