ಮಂಗಳೂರು : ಮಂಗಳೂರಿನ ಪಿಲಿಕುಳ ಲೇಕ್ ಗಾರ್ಡನ್‍ನಲ್ಲಿ ಅಕ್ಟೋಬರ್ 25 ರಂದು ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ನಡೆಯಲಿದೆ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 8:30 ಗಂಟೆಯಿಂದ ಪಿಲಿಕುಳ ಕೆರೆಯಲ್ಲಿ ಬೆಳೆಸಿದ ಮೀನುಗಳನ್ನು ಹಿಡಿದು, ಮೀನು ದಾಸ್ತಾನು ಇರುವವರೆಗೆ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ. ಇದೇ ವೇಳೆ ಕರ್ನಾಟಕ ಮೀನುಗಾರಿಕಾ ಇಲಾಖೆ ವತಿಯಿಂದ ರೋಹು, ಕಾಡ್ಲಾ, ತಿಲೇಪಿಯಾ ಮುಂತಾದ ಮೀನು ಮರಿಗಳನ್ನು ಕೆರೆಗೆ ಬಿಡಲಾಗುತ್ತದೆ. ಮೇಳದಲ್ಲಿ ಸ್ಥಳದಲ್ಲೇ ತಯಾರಿಸಿದ ಸಿಹಿನೀರಿನ ಹಾಗೂ ಸಮುದ್ರದ ಮೀನಿನ ಖಾದ್ಯಗಳು ಮತ್ತು ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.