ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ೫೯ನೇ ವರ್ಧಂತ್ಯುತ್ಸವದ ಅಂಗವಾಗಿ ಧರ್ಮಸ್ಥಳದಲ್ಲಿ ಆಯೋಜಿಸಲಾದ ಛದ್ಮವೇಷ ಸ್ಪರ್ಧೆಯು ವೈವಿಧ್ಯಮಯ ವೇಷಭೂಷಣ ಹಾಗೂ ಆಕರ್ಷಕ ಅಭಿನಯಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.
ಸ್ಪರ್ಧಿಗಳು ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ಮೂಲಕ ತಮ್ಮ ಸೃಜನಶೀಲತೆ, ಕಲಾತ್ಮಕ ಕೌಶಲ ಹಾಗೂ ಅಭಿನಯ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸಾಂಪ್ರದಾಯಿಕ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಸಂದೇಶಗಳನ್ನು ಸಾರುವ ವೈವಿಧ್ಯಮಯ ವೇಷಗಳು ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿದ್ದವು.
ಈ ಸ್ಪರ್ಧೆಯು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಅರ್ಥಪೂರ್ಣ ವೇದಿಕೆಯಾಗಿ ಮೂಡಿಬಂತು. ಸ್ಪರ್ಧಿಗಳ ಕಲ್ಪನಾಶಕ್ತಿ ಹಾಗೂ ವಿಭಿನ್ನ ಪಾತ್ರಗಳನ್ನು ಜೀವಂತವಾಗಿ ಚಿತ್ರಿಸುವ ಪ್ರಯತ್ನಗಳು ಕಾರ್ಯಕ್ರಮದ ವಿಶಿಷ್ಟತೆಗೆ ಕಾರಣವಾದವು.
ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿವರ ಹೀಗಿದೆ: ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಿಹಿರಾ ಮತ್ತು ಬಳಗ ಪ್ರಥಮ ಹಾಗೂ ಅವನಿ ಎಸ್. ಶೆಟ್ಟಿ ದ್ವಿತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಕೀರ್ತಿ ಮತ್ತು ಬಳಗ ಪ್ರಥಮ ಹಾಗೂ ಶ್ರಾವ್ಯ ಮತ್ತು ಬಳಗ ದ್ವಿತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಖರ್ಚು ಉಗ್ರಾಣ ಮತ್ತು ಬಳಗ ಪ್ರಥಮ ಹಾಗೂ ಪ್ರೇರಣಾ ತಂಡ ದ್ವಿತೀಯ ಸ್ಥಾನ ಗಳಿಸಿತು. ಸೀನಿಯರ್ ವಿಭಾಗದಲ್ಲಿ ಜನಾರ್ದನ ಮತ್ತು ಬಳಗ ಪ್ರಥಮ ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ. ಬಳಗ ದ್ವಿತೀಯ ಸ್ಥಾನ ಪಡೆದರೆ, ಸೂಪರ್ ಸೀನಿಯರ್ ವಿಭಾಗದಲ್ಲಿ ರಂಗಶಿವ ಮತ್ತು ಬಳಗ ಪ್ರಥಮ ಹಾಗೂ ಸಾಮರ್ಸೆಟ್ ದ್ವಿತೀಯ ಸ್ಥಾನ ಪಡೆದುಕೊಂಡರು.