image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್‌ನಲ್ಲಿ ಸಂಭ್ರಮದಿಂದ ನೆರವೇರಿದ ‘ಅಭಿವ್ಯಕ್ತಿ’ ವೇದಿಕೆ ಉದ್ಘಾಟನೆ

ಆಳ್ವಾಸ್‌ನಲ್ಲಿ ಸಂಭ್ರಮದಿಂದ ನೆರವೇರಿದ ‘ಅಭಿವ್ಯಕ್ತಿ’ ವೇದಿಕೆ ಉದ್ಘಾಟನೆ

ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ವೇದಿಕೆ ‘ಅಭಿವ್ಯಕ್ತಿ’ಯ ೨೦೨೬–೨೭ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಕಾಲೇಜಿನ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ಜರುಗಿತು. ಖ್ಯಾತ ನಿರೂಪಕ ನಿತೇಶ್ ಪೂಜಾರಿ ಮಾರ್ನಾಡು ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನಿರೂಪಣೆ ಎಂಬುದು ಕೇವಲ ಮಾತನಾಡುವ ಕಲೆಯಲ್ಲದೆ, ಅದಕ್ಕೆ ಜ್ಞಾನ, ಆತ್ಮವಿಶ್ವಾಸ, ಪೂರ್ವ ಸಿದ್ಧತೆ, ವಿಷಯದ ಮೇಲಿನ ಆಸಕ್ತಿ, ಧ್ವನಿಯ ಏರಿಳಿತ ಹಾಗೂ ಬದ್ಧತೆ ಅತ್ಯಂತ ಅಗತ್ಯ ಎಂದು ತಿಳಿಸಿದರು. ನಿರೂಪಣೆ ಸುಲಭದ ಕೆಲಸವಲ್ಲದ ಕಾರಣ ಪ್ರತಿಯೊಂದು ಕಾರ್ಯಕ್ರಮಕ್ಕೂ ಅದರ ಸ್ವರೂಪಕ್ಕೆ ತಕ್ಕಂತೆ ಸಿದ್ಧತೆ ಮತ್ತು ಮೂಲಭೂತ ಮಾಹಿತಿ ಅತ್ಯಾವಶ್ಯಕ ಎಂದರು. ಸ್ಕ್ರಿಪ್ಟ್ ಅನ್ನು ಕಂಠಪಾಠ ಮಾಡುವ ಬದಲು ಅದರ ಆಶಯವನ್ನು ಮನಸ್ಸಿನಲ್ಲಿ ಅರ್ಥೈಸಿಕೊಂಡು ಸಹಜವಾಗಿ ಪ್ರಸ್ತುತಪಡಿಸುವುದು ಮುಖ್ಯ ಎಂದು ಹೇಳಿದ ಅವರು, ನಿರೂಪಕರು ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಮ್ಮ ವೃತ್ತಿಜೀವನದ ಆರಂಭವನ್ನು ಸ್ಮರಿಸಿದ ಅವರು, ಆಳ್ವಾಸ್ ವಿರಾಸತ್ ತಮ್ಮ ನಿರೂಪಣಾ ಬದುಕಿಗೆ ಪ್ರಮುಖ ವೇದಿಕೆಯಾಯಿತು ಎಂದು ಸ್ಮರಿಸಿದರು. ಇತರರನ್ನು ಗಮನಿಸಿ ಕಲಿಯುವುದು ಒಳ್ಳೆಯದಾದರೂ ಯಾರನ್ನೂ ಕುರುಡಾಗಿ ಅನುಕರಿಸದೆ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಳ್ಳಬೇಕು ಮತ್ತು ಸಣ್ಣಪುಟ್ಟ ಅವಕಾಶಗಳನ್ನು ಕಡೆಗಣಿಸದೆ ಪ್ರಗತಿಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ವಹಿಸಿದ್ದರು. ಸಮಾರಂಭದಲ್ಲಿ ‘ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆಯ ಕಾರ್ಯದರ್ಶಿಯಾಗಿ ರವಿ ಕೊಪ್ಪಳ, ಉಪಕಾರ್ಯದರ್ಶಿಯಾಗಿ ಕಾವ್ಯ ಎನ್.ವಿ. ಹಾಗೂ ಖಜಾಂಚಿಯಾಗಿ ವಿಧಿಶಾ ಜವಾಬ್ದಾರಿ ವಹಿಸಿಕೊಂಡರು. ಹಾಗೆಯೇ ಪ್ರಚಾರ ವಿಭಾಗದ ಜವಾಬ್ದಾರಿಯನ್ನು ಸ್ಯಾಮುಯೆಲ್, ಅಲಕನಂದಾ, ಮಹೇಶ್ ಡಿ.ಎನ್. ಮತ್ತು ರೋಬಿನ್ ಬೆಳ್ಳಿಯಪ್ಪ ನಿರ್ವಹಿಸಲಿದ್ದಾರೆ.

Category
ಕರಾವಳಿ ತರಂಗಿಣಿ