ಬದಿಯಡ್ಕ: ಪಂಚಮವೇದವಾದ ಸಂಗೀತಕ್ಕೆ ಸುದೀರ್ಘವಾದ ಪರಂಪರೆಯಿದ್ದು, ಸಾವಿರಾರು ವರ್ಷಗಳಿಂದ ಅದು ತನ್ನ ನಿಷ್ಕಳಂಕ ರೂಪದಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿದುಬರುತ್ತಿದೆ ಎಂದು ಪುತ್ತೂರಿನ ದ್ವಾರಕಾ ಕಾರ್ಪೊರೇಷನ್ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ತಿಳಿಸಿದರು.
ಇಲ್ಲಿನ ಬಳ್ಳಪದವು ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ವಿಜಯದಶಮಿ ದಿನದಂದು ನಡೆದ ಸಮಾರಂಭದಲ್ಲಿ, ಸಂಗೀತ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಅವರು ರಚಿಸಿದ ‘ಸಂಗೀತ ಪಾಠಮಾಲಿಕೆ’ ಪುಸ್ತಕದ ಪರಿಷ್ಕೃತ ನಾಲ್ಕನೇ ಆವೃತ್ತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಈ ಕೃತಿಯು ಸಂಗೀತ ಕಲಿಕೆಯ ಆರಂಭಿಕರಿಗೆ ಅತ್ಯುತ್ತಮ ಆಕರ ಗ್ರಂಥವಾಗಿದ್ದು, ನಾಲ್ಕನೇ ಆವೃತ್ತಿ ಕಾಣುತ್ತಿರುವುದೇ ಇದರ ಜನಪ್ರಿಯತೆ ಹಾಗೂ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಹಾಗೂ ಸಾಹಿತಿ ಡಾ. ವಸಂತಕುಮಾರ ಪೆರ್ಲ ಮಾತನಾಡಿ, ಕಳೆದ 27 ವರ್ಷಗಳಿಂದ ಕರಾವಳಿ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದ ವೀಣಾವಾದಿನಿ ಸಂಗೀತ ವಿದ್ಯಾಪೀಠದಂತಹ ಸಂಸ್ಥೆಗಳನ್ನು ಬೆಂಬಲಿಸುವುದು ಸಂಸ್ಕೃತಿಯ ಉಳಿವಿಗೆ ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುದ್ಕುಳಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಂಥಕರ್ತ ಯೋಗೀಶ ಶರ್ಮಾ ಅವರು ಕೃತಿ ಮತ್ತು ಸಂಸ್ಥೆಯ ಪಯಣದ ಕುರಿತು ವಿವರ ನೀಡಿದರು. ವಯಲಿನ್ ವಿದ್ವಾನ್ ಪ್ರಭಾಕರ ಕುಂಜಾರು ಶುಭ ಹಾರೈಸಿದರೆ, ವಿದ್ಯಾಸರಸ್ವತಿ ಎಂ. ಧನ್ಯವಾದ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸರಸ್ವತಿ ಪೂಜೆಯ ಬಳಿಕ ನೂತನ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಹಾಗೂ ವಿದ್ಯಾರಂಭ ನೆರವೇರಿತು. ನಂತರ ಸಂಸ್ಥೆಯ ವಿದ್ಯಾರ್ಥಿಗಳಾದ ಶೋಭನಾ ಯರ್ಮುಂಜ ಮತ್ತು ಆದ್ಯಾ ಪಿ. ಅವರಿಂದ ಸಂಗೀತ ಕಚೇರಿ ಜರುಗಿತು. ಇವರಿಗೆ ಪಕ್ಕವಾದ್ಯದಲ್ಲಿ ಪ್ರಭಾಕರ ಕುಂಜಾರು, ಜಗದೀಶ್ ಕೊರೆಕ್ಕಾನ (ವಯಲಿನ್), ಆಶ್ಲೇಷ ಪಿ., ವಿಶ್ವಾಸ್ ಪದ್ಯಾಣ (ಮೃದಂಗ) ಹಾಗೂ ಪರಾಶರ ಶರ್ಮ ಯು., ವಿಶ್ರುತ ಬಿ. (ಘಟಂ) ಸಹಕರಿಸಿದರು.