ಮಂಗಳೂರು: ಶೇ. 65ರಷ್ಟು ಸುಟ್ಟ ಗಾಯಗಳಿಂದ ಬಳಲಿದ್ದ ವ್ಯಕ್ತಿಯು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರ ಅತ್ಯಾಧುನಿಕ ಚಿಕಿತ್ಸೆ ಮತ್ತು ಮೃತದೇಹದ ಚರ್ಮ ಕಸಿ (ಕ್ಯಾಡವೆರಿಕ್ ಸ್ಕಿನ್ ಗ್ರಾಫ್ಟಿಂಗ್) ನೆರವಿನಿಂದ ಸಂಪೂರ್ಣ ಗುಣಮುಖರಾಗಿ ಮತ್ತೆ ಕೆಲಸಕ್ಕೆ ಮರಳಿದ್ದಾರೆ.
ಚಿಕ್ಕಮಗಳೂರು ಮೂಲದ ಸುರೇಶ್ (ಹೆಸರು ಬದಲಾಯಿಸಲಾಗಿದೆ) ಅವರು ಕೆಲಸದ ಸ್ಥಳದಲ್ಲಿ ಆಕಸ್ಮಿಕವಾಗಿ ಪೆಟ್ರೋಲ್ ಸುರಿದು ಗಂಭೀರವಾಗಿ ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ಸ್ಥಿತಿ ಚಿಂತಾಜನಕವಾಗಿದ್ದ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ಲಾಸ್ಟಿಕ್ ಮತ್ತು ಪುನರ್ನಿರ್ಮಾಣ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಅರವಿಂದ್ ರಾವ್ ನೇತೃತ್ವದ ವೈದ್ಯರ ತಂಡವು ನಿರಂತರ ಚಿಕಿತ್ಸೆ ನೀಡಿ ಇವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ.
ಆಸ್ಪತ್ರೆಯಲ್ಲಿರುವ ಫಾದರ್ ಮುಲ್ಲರ್ ರೋಟರಿ ಸ್ಕಿನ್ ಬ್ಯಾಂಕ್ ಮೂಲಕ ಲಭ್ಯವಾದ ದಾನಿ ಚರ್ಮವನ್ನು ಆರಂಭಿಕ ಹಂತದಲ್ಲಿ ಬಳಸಿಕೊಳ್ಳಲಾಗಿದ್ದು, ಇದು ರೋಗಿಯ ಚೇತರಿಕೆಗೆ ಪ್ರಮುಖ ಪಾತ್ರ ವಹಿಸಿದೆ. ಎರಡು ತಿಂಗಳ ಸುದೀರ್ಘ ಚಿಕಿತ್ಸೆ ಮತ್ತು ಆರೈಕೆಯ ಬಳಿಕ ಸುರೇಶ್ ಅವರು ಗುಣಮುಖರಾಗಿ ತಮ್ಮ ದೈನಂದಿನ ಕೆಲಸಕ್ಕೆ ಮರಳಿದ್ದು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.