ಮಂಗಳೂರು: ವಿಜೃಂಭಣೆಯಿಂದ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವದ ಶುಭ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಅವರು ಮಂಗಳವಾರ ಸಂಜೆ ನಗರದ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಕರಾವಳಿ ಭಾಗದ ಪ್ರವಾಸ ಕೈಗೊಂಡಿರುವ ಅವರು, ಕ್ಷೇತ್ರದ ಸನ್ನಿಧಿಗೆ ಆಗಮಿಸುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಧಾರ್ಮಿಕ ಗೌರವಗಳೊಂದಿಗೆ ಆತ್ಮೀಯ ಸ್ವಾಗತ ಕೋರಿದರು.
ಕ್ಷೇತ್ರ ಪ್ರವೇಶಿಸಿದ ಬಿ. ಕೆ. ಹರಿಪ್ರಸಾದ್ ಅವರು ಪ್ರಥಮವಾಗಿ ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ಶ್ರೀ ಗೋಕರ್ಣನಾಥೇಶ್ವರ ಸ್ವಾಮಿಯ ದರ್ಶನ ಪಡೆದು, ಸಮಾಜ ಹಾಗೂ ನಾಡಿನ ಒಳಿತಿಗಾಗಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ಬಳಿಕ ವರ್ಣರಂಜಿತವಾಗಿ ಅಲಂಕೃತಗೊಂಡಿರುವ ಭವ್ಯ ದರ್ಬಾರ್ ಸಭಾಂಗಣಕ್ಕೆ ತೆರಳಿ, ಅಲ್ಲಿ ದಸರಾ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳ ದರ್ಶನ ಪಡೆದು ಶ್ರದ್ಧಾಭಕ್ತಿಗಳಿಂದ ಪುಷ್ಪಾರ್ಚನೆ ನೆರವೇರಿಸಿದರು. ತದನಂತರ ಯುಗಪುರುಷ, ಬ್ರಹ್ಮಶ್ರೀ ನಾರಾಯಣ ಗುರುಗಳ ಸನ್ನಿಧಿಗೆ ತೆರಳಿದ ಅವರು ಮಹಾಮಂಗಳಾರತಿ ನೆರವೇರಿಸಿ ನಮಸ್ಕರಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ಜನಪ್ರತಿನಿಧಿಗಳು, ಹಿರಿಯ ನಾಯಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕುದ್ರೋಳಿ ಕ್ಷೇತ್ರದ ದರ್ಶನ ಮತ್ತು ಪೂಜಾ ಕೈಂಕರ್ಯಗಳನ್ನು ಪೂರ್ಣಗೊಳಿಸಿದ ನಂತರ ಅವರು ಮಂಗಳೂರಿನ ಪ್ರಸಿದ್ಧ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು.