image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ದಸರಾ ವೈಭವ, ಆಕರ್ಷಕ ದರ್ಬಾರು ಮಂಟಪದ ವೈಭವ

ಮಂಗಳೂರು ದಸರಾ ವೈಭವ, ಆಕರ್ಷಕ ದರ್ಬಾರು ಮಂಟಪದ ವೈಭವ

ಮಂಗಳೂರು : ಮೈಸೂರು ದಸರಾ ಬಳಿಕ ರಾಜ್ಯದ ಎರಡನೇ ಮಹಾ ದಸರಾ ಮಹೋತ್ಸವ ಎಂಬ ಹಿರಿಮೆ ಪಡೆದುಕೊಂಡ ಮಂಗಳೂರು ದಸರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಅನ್ನಪ್ರಸಾದ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮವನ್ನು ಇಮ್ಮಡಿಗೊಳಿಸಿವೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪ್ಯಾಲೇಸ್ ಮಾದರಿಯ ದರ್ಬಾರು ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ, ಶಾರದೆ, ಆದಿಶಕ್ತಿ ಹಾಗೂ ನವದುರ್ಗೆಯರ ಮೂರ್ತಿಗಳನ್ನು ಭಕ್ತ ಜನರು ಕಣ್ಣುಂಬಿಕೊಂಡು ಧನ್ಯತಾಭಾವ ವ್ಯಕ್ತಪಡಿಸುತ್ತಿದ್ದಾರೆ.

ದರ್ಬಾರು ಮಂಟಪವನ್ನು ಶ್ವೇತವರ್ಣ, ಲೈಟ್ ಗೋಲ್ಡ್ ಹಾಗೂ ಮರೂನ್ ಬಣ್ಣಗಳಿಂದ ರಚಿಸಲಾಗಿದ್ದು, ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಮಂಟಪದಲ್ಲಿ ಚಿನ್ನದ ಬಣ್ಣದ ದೀಪಗಳು, ನವಿಲು, ಹಂಸ, ಬಳ್ಳಿಯ ಡಿಸೈನ್, ಶಿಲಾಬಾಲಕಿಯರು, ದೇವರ ಮೂರ್ತಿಗಳು ಹಾಗೂ ಆಭರಣ ಮಾದರಿಯ ಕಲಾಕೃತಿಗಳನ್ನು ರೂಪಿಸಲಾಗಿದೆ. ನವದುರ್ಗೆಯರ ಮಂಟಪದ ಮೇಲ್ಭಾಗದಲ್ಲಿ ಆನೆಯ ಸೊಂಡಿಲು, ಗಂಟೆ ಮತ್ತು ಜುಮುಕಿ ಮಾದರಿಯ ಅಲಂಕಾರವಿದೆ. 18 ಕಂಬಗಳನ್ನು ಹೊಂದಿರುವ ಈ ಮಂಟಪದಲ್ಲಿ ಶಾರದೆ ಪ್ರತಿಷ್ಠಾಪನೆ ಮಾಡಿದ ಭಾಗದಲ್ಲಿ ನೂರಕ್ಕೂ ಅಧಿಕ ಅಲಂಕಾರಿಕ ಗಂಟೆಗಳು ಹಾಗೂ ವೃತ್ತಾಕಾರದ ವಿನ್ಯಾಸದ ಮಧ್ಯೆ ಝೂಮರ್ ಅಳವಡಿಸಿರುವುದು ಈ ಬಾರಿಯ ದಸರಾದ ಪ್ರಮುಖ ಆಕರ್ಷಣೆಯಾಗಿದೆ.

ಇದೇ ಸಂದರ್ಭದಲ್ಲಿ, ವಿಶ್ವ ಬಿಲ್ಲವ ಮಹಿಳಾ ಸಂಘವು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಶಿಸ್ತುಬದ್ಧವಾಗಿ ಕಾರ್ಯಾಚರಿಸುತ್ತಿದೆ. ಉರ್ಮಿಳಾ ರಮೇಶ್ ಕುಮಾರ್ ಅವರ ಸಂಸ್ಥಾಪಕ ಅಧ್ಯಕ್ಷತೆಯಲ್ಲಿ ಹಾಗೂ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಬೆಳೆದುಬಂದಿರುವ ಈ ಸಂಘವು ಮಹಿಳೆಯರ ಸಬಲೀಕರಣಕ್ಕೆ ಮತ್ತು ಸಾಮಾಜಿಕ ಒಗ್ಗಟ್ಟಿಗೆ ಮಾದರಿಯಾಗಿದೆ.

Category
ಕರಾವಳಿ ತರಂಗಿಣಿ