ಮಂಗಳೂರು : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಅಂಗವಾಗಿ, ಸಂತೋಷಿ ಕಲಾ ಮಂಟಪದಲ್ಲಿ ಹತ್ತು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿವೆ. ತುಳುನಾಡು ಸೇರಿದಂತೆ ಉಡುಪಿ, ಕುಂದಾಪುರ, ಕಾಸರಗೋಡು, ಬೆಂಗಳೂರು ಮತ್ತುೈಸೂರು ಭಾಗಗಳ ವಿವಿಧ ಕಲಾ ತಂಡಗಳಿಂದ ಭರತನಾಟ್ಯ, ನೃತ್ಯ ಸಂಭ್ರಮ ಹಾಗೂ ಸುಸ್ವರ ರಾಗಸಂಗಮದಂತಹ ಕಾರ್ಯಕ್ರಮಗಳು ಕಲಾಪ್ರೇಮಿಗಳನ್ನು ಮಂತ್ರಮುಗ್ಧಗೊಳಿಸುತ್ತಿವೆ.
ದಶದಿನಗಳ ಈ ಮಹೋತ್ಸವದಲ್ಲಿ ಒಟ್ಟು ಒಂದೂವರೆ ಸಾವಿರಕ್ಕೂ ಅಧಿಕ ಕಲಾವಿದರು ಅರುವತ್ತು ಗಂಟೆಗಳ ಕಾಲ ಸಾಂಸ್ಕೃತಿಕ ಸೇವೆ ಒದಗಿಸಲಿದ್ದಾರೆ. ಮಹಿಳಾ ದಸರಾ, ಮಕ್ಕಳ ದಸರಾ, ರುದ್ರ ತಾಂಡವ, ದಸರಾ ಕವಿಗೋಷ್ಠಿ, ರಂಗತರಂಗ, ನೃತ್ಯ ಸ್ಪರ್ಧೆಗಳು, ಮತ್ತು ಭಕ್ತಿ ಭಜನಾ ಸಂಗಮದಂತಹ ಹತ್ತು ಹಲವು ವಿಶೇಷ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ಮಹಿಳೆಯರನ್ನು ಗುರುತಿಸಿ 'ಅಸಾಮಾನ್ಯ ಸ್ತ್ರೀ ಪುರಸ್ಕಾರ' ನೀಡಿ ಗೌರವಿಸಲಾಗುವುದು. ದಸರಾ ಯಶಸ್ಸಿನಲ್ಲಿ ಗೋಕರ್ಣನಾಥ ಸೇವಾ ದಳ, ಯುವವಾಹಿನಿ ಕೇಂದ್ರ ಸಮಿತಿ, ವಿವಿಧ ಬಿಲ್ಲವ ಸಂಘಗಳು ಹಾಗೂ ನೂರಾರು ಸ್ವಯಂಸೇವಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿ ಪ್ರತಿದಿನ ತಡರಾತ್ರಿಯವರೆಗೆ ಶ್ರಮಿಸುತ್ತಿದ್ದಾರೆ.