ಮೂಡುಬಿದಿರೆ : ಮೂಡುಬಿದಿರೆ ಜೈನಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಸಮಾಜಸೇವಕ ಹಾಗೂ ಸಹಕಾರ ರಂಗದ ಧುರೀಣ ಡಾ. ರಾಜೇಂದ್ರ ಕುಮಾರ್ ಅವರ ಸ್ವಗೃಹಕ್ಕೆ ಆಗಮಿಸಿ, ಅವರ ಕ್ಷೇಮ ಸಮಾಚಾರ ಹಾಗೂ ಆರೋಗ್ಯ ವಿಚಾರಿಸಿ ಆಶೀರ್ವಾದ ನೀಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಡಾ. ರಾಜೇಂದ್ರ ಕುಮಾರ್ ಅವರು ಸದಾ ಸಮಾಜದ ಹಿತವನ್ನು ಬಯಸುವ ಹಾಗೂ ಜನಪರ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿಯಾಗಿದ್ದಾರೆ. ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಶೋಷಿತರ ಹಾಗೂ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರ ಕ್ಷೇತ್ರದ ಅಭ್ಯುದಯಕ್ಕಾಗಿ ಅವರು ನೀಡುತ್ತಿರುವ ಸೇವೆ ಶ್ಲಾಘನೀಯವಾದದ್ದು. ಮುಂದಿನ ದಿನಗಳಲ್ಲೂ ಅವರ ಸಮಾಜಮುಖಿ ಕಾಯಕ ಮತ್ತು ಸೇವಾ ಯೋಜನೆಗಳು ಇನ್ನಷ್ಟು ವಿಸ್ತಾರಗೊಂಡು, ಸಮಾಜಕ್ಕೆ ಹೆಮ್ಮರವಾಗಲಿ ಎಂದು ಶುಭ ಹಾರೈಸಿ ಅನುಗ್ರಹಿಸಿದರು.
ಈ ವಿಶೇಷ ಭೇಟಿಯ ವೇಳೆಯಲ್ಲಿ ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ, ಡಾ. ರಾಜೇಂದ್ರ ಕುಮಾರ್ ಅವರ ಹಿರಿಯ ಸಹೋದರಿ ಇಂದಿರಾ ಕುಮಾರಿ ಹಾಗೂ ಪ್ರಮುಖರಾದ ಸುನೀಲ್ ಕುಮಾರ್ ಬಜಗೋಳಿ ಉಪಸ್ಥಿತರಿದ್ದು, ಶ್ರೀಗಳ ಕೃಪಾದೃಷ್ಟಿಗೆ ಪಾತ್ರರಾದರು.