ಮಂಗಳೂರು : ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಕಾಲೇಜಿನ ಮೈದಾನದಲ್ಲಿ ದಸರಾ ಹಬ್ಬದ ಅಂಗವಾಗಿ ‘ಮಿಲಾಗ್ರಿಸ್ ಪಿಲಿ ಗರ್ದ್’ ಸೀಸನ್ 3 ಕಾರ್ಯಕ್ರಮವು ಜರುಗಿತು. ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಭಾಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಹುಲಿವೇಷದ ಸಾಂಪ್ರದಾಯಿಕ ಕಲೆ ಹಾಗೂ ಚೆಂಡೆ ವಾದನದೊಂದಿಗೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.
ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ. ಫಾ. ಐವನ್ ಮೈಕಲ್ ರೋಡ್ರಿಗಸ್ ಮಾತನಾಡಿ, ದಸರಾ ಹಬ್ಬವು ಯಾವುದೇ ಮತ ಧರ್ಮ ಭೇದವಿಲ್ಲದೆ ಎಲ್ಲರೂ ಸೇರಿ ಆಚರಿಸುವ ಭಾವೈಕ್ಯತೆಯ ಸಂಕೇತವಾಗಿದೆ ಹಾಗೂ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಅತ್ಯಂತ ಸಂತಸದ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಗುರು ತಂಡದಿಂದ ಚೆಂಡೆ ಹಾಗೂ ಕೇರಳದ ಆದ್ಯಾ ವಿಜಯನ್ ಅವರಿಂದ ವಯೋಲಿನ್ ಜುಗಲ್ ಬಂದಿ ನಡೆಯಿತು. ಇದರೊಂದಿಗೆ ಟೀಮ್ ಅಗೋರಿ ತಂಡದಿಂದ ಹುಲಿವೇಷ ಕುಣಿತ ಪ್ರದರ್ಶನಗೊಂಡಿತು.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಅಲ್ವಿನ್ ಸೆರಾವೊ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ಚೇತನಾ ಕುಮಾರಿ, ಕಾರ್ಯಕ್ರಮ ಸಂಯೋಜಕರಾದ ಶ್ರೀ ಆಕಾಶ್ ಶೆಟ್ಟಿ, ವಿಶೇಷ ಕಾರ್ಯಕ್ರಮದ ಸಂಯೋಜಕರಾದ ಫ್ರೆನ್ಸಿಟ ಮೆನೆಸ್ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಮತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.