ಮಂಗಳೂರು:ಔಷಧ-ನಿರೋಧಕ ಸೋಂಕುಗಳ ಹರಡುವಿಕೆ, ಹವಾಮಾನ ಬದಲಾವಣೆಯಿಂದ ಬದಲಾಗುತ್ತಿರುವ ರೋಗಗಳ ಸ್ವರೂಪ ಹಾಗೂ ಕೋವಿಡ್-19 ನೀಡಿದ ಪಾಠಗಳ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಪ್ರಮುಖ ಸಾಂಕ್ರಾಮಿಕ ರೋಗ ತಜ್ಞರು ಸಮಾಲೋಚನೆ ನಡೆಸಿದ ಮೂರು ದಿನಗಳ 'ನೇಚರ್ ಕಾನ್ಫರೆನ್ಸ್ ಇಂಡಿಯಾ 2026' ಸಮ್ಮೇಳನವು ಮಣಿಪಾಲ್ನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE)ನಲ್ಲಿ ಅಕ್ಟೋಬರ್ 17ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.
‘ಬದಲಾಗುತ್ತಿರುವ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗಗಳ ಸವಾಲನ್ನು ಎದುರಿಸುವುದು’ ಎಂಬ ವಿಷಯದಡಿ ಅಕ್ಟೋಬರ್ 14ರಿಂದ 16ರವರೆಗೆ ನಡೆದ ಈ ಸಮ್ಮೇಳನವನ್ನು ನೇಚರ್ ಮೆಡಿಸಿನ್, ನೇಚರ್ ಮೈಕ್ರೋಬಯಾಲಜಿ, ನೇಚರ್ ಹೆಲ್ತ್, ನೇಚರ್ ಕಮ್ಯುನಿಕೇಷನ್ಸ್ ಮತ್ತು MAHE ಜಂಟಿಯಾಗಿ ಆಯೋಜಿಸಿದ್ದವು. ಇದು ಭಾರತದಲ್ಲಿ ಆಯೋಜಿಸಲಾದ ಎರಡನೇ ನೇಚರ್ ಸಮ್ಮೇಳನವಾಗಿದ್ದು, 2024ರಲ್ಲಿ ಜೈವವೈದ್ಯಕೀಯ ಅನ್ವಯಿಕೆಗಳಲ್ಲಿನ ನ್ಯಾನೋ ವಸ್ತುಗಳ ಕುರಿತು ನಡೆದ ಮೊದಲ ಸಮ್ಮೇಳನದ ಮುಂದುವರಿದ ಭಾಗವಾಗಿ ಇದನ್ನು ಹಮ್ಮಿಕೊಳ್ಳಲಾಗಿತ್ತು.
ಈ ಮಹತ್ವದ ಸಮ್ಮೇಳನದಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳ ಸಂಶೋಧಕರು, ವೈದ್ಯಕೀಯ ತಜ್ಞರು ಹಾಗೂ ಸಾರ್ವಜನಿಕ ಆರೋಗ್ಯ ಪರಿಣತರು ಭಾಗವಹಿಸಿದ್ದರು. ರೋಗಗಳ ಮೇಲ್ವಿಚಾರಣೆ, ಆಂಟಿಮೈಕ್ರೊಬಿಯಲ್ ಪ್ರತಿರೋಧ (AMR), ರೋಗನಿರ್ಣಯ, ಲಸಿಕೆಗಳ ಅಭಿವೃದ್ಧಿ, ಹವಾಮಾನ ಬದಲಾವಣೆ ಮತ್ತು ಸಾಂಕ್ರಾಮಿಕ ರೋಗ ಎದುರಿಸುವ ಸಿದ್ಧತೆ ಕುರಿತು ಗಂಭೀರ ಚರ್ಚೆಗಳು ಜರುಗಿದವು. ವಿಶೇಷವಾಗಿ ಭಾರತದ ಆರೋಗ್ಯ ವ್ಯವಸ್ಥೆಗೆ ಎದುರಾಗುತ್ತಿರುವ ಪ್ರಮುಖ ಸವಾಲುಗಳ ಕುರಿತು ವಿಶೇಷ ಗಮನ ಹರಿಸಲಾಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ MAHEಯ ಕುಲಪತಿ ಡಾ. ಶರತ್ ಕೆ. ರಾವ್, ಸಾಂಕ್ರಾಮಿಕ ರೋಗಗಳು ಒಡ್ಡುತ್ತಿರುವ ಸಂಕೀರ್ಣ ಸವಾಲುಗಳನ್ನು ಎದುರಿಸಲು ವೈಜ್ಞಾನಿಕ ಸಹಯೋಗ, ನಿರಂತರ ಸಂಶೋಧನೆ ಮತ್ತು ಜ್ಞಾನ ವಿನಿಮಯ ಅಗತ್ಯವಾಗಿದೆ ಎಂದರು. ಈ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ತಜ್ಞರನ್ನು ಒಂದೇ ವೇದಿಕೆಗೆ ತರಲು ನೇಚರ್ ಪೋರ್ಟ್ಫೋಲಿಯೊ ಜೊತೆ ಪಾಲುದಾರಿಕೆ ಹೊಂದಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು. ನೇಚರ್ ಹೆಲ್ತ್ನ ಹಿರಿಯ ಸಂಪಾದಕ ಲೊರೆಂಜೊ ರಿಗೆಟ್ಟೊ ಮಾತನಾಡಿ, ಸಾಂಕ್ರಾಮಿಕ ರೋಗ ತಡೆಗೆ ಆಂಟಿಮೈಕ್ರೊಬಿಯಲ್ ಪ್ರತಿರೋಧ ಹಾಗೂ ಪರಿಸರ ಅಂಶಗಳ ಕುರಿತು ಆಳವಾದ ತಿಳುವಳಿಕೆ ಮುಖ್ಯವಾಗಿದ್ದು, ಈ ಸಮ್ಮೇಳನವು ಜಾಗತಿಕ ಆರೋಗ್ಯದ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಹಕಾರಿಯಾಗಿದೆ ಎಂದರು.
ಸಮ್ಮೇಳನದ ಪ್ರಮುಖ ಭಾಷಣಗಳಲ್ಲಿ ಜಾಗತಿಕ ಮಟ್ಟದ ಪ್ರಸಿದ್ಧ ಸಂಶೋಧಕರು ಪ್ರಮುಖ ವಿಚಾರಗಳನ್ನು ಮಂಡಿಸಿದರು. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಲಾರೆನ್ ಗಾರ್ಡ್ನರ್ ಅವರು ಕೋವಿಡ್-19 ನಂತರದ ಯುಗದಲ್ಲಿ ಸಾರ್ವಜನಿಕ ಆರೋಗ್ಯ ನಿರ್ಧಾರಗಳಲ್ಲಿ ದತ್ತಾಂಶದ (Data) ಪಾತ್ರವನ್ನು ವಿವರಿಸಿದರು. ಮೆಕ್ಗಿಲ್ ವಿಶ್ವವಿದ್ಯಾಲಯದ ಮಧುಕರ್ ಪೈ ಅವರು ಕ್ಷಯರೋಗದ (TB) ರೋಗನಿರ್ಣಯ ವಿಧಾನಗಳಲ್ಲಿ ತರಬೇಕಾದ ನಾವೀನ್ಯತೆಗಳ ಬಗ್ಗೆ ಬೆಳಕು ಚೆಲ್ಲಿದರು. ವಿಟ್ವಾಟರ್ಸ್ರ್ಯಾಂಡ್ ವಿಶ್ವವಿದ್ಯಾಲಯದ ಶಬೀರ್ ಎ. ಮಧಿ ಅವರು ಮಕ್ಕಳ ಉಸಿರಾಟದ ಸೋಂಕು ತಡೆಗಟ್ಟುವಿಕೆಯಲ್ಲಿ ಲಸಿಕೆಗಳ ಪಾತ್ರವನ್ನು ಚರ್ಚಿಸಿದರೆ, ಎರಾಸ್ಮಸ್ ವಿಶ್ವವಿದ್ಯಾಲಯ ರೋಟರ್ಡ್ಯಾಮ್ನ ಮರಿಯನ್ ಕೂಪ್ಮಾನ್ಸ್ ಅವರು ಮುಂಬರುವ ಸಾಂಕ್ರಾಮಿಕ ರೋಗಗಳ ಏಕಾಏಕಿ ಹರಡುವಿಕೆಯನ್ನು ಮುಂಚಿತವಾಗಿಯೇ ಊಹಿಸುವ ಮತ್ತು ಸಿದ್ಧತೆ ಹೊಂದುವ ಮಾದರಿಗಳನ್ನು ವಿವರಿಸಿದರು.
ಇದಲ್ಲದೆ, ಕ್ಲೆಬ್ಸಿಯೆಲ್ಲಾ ನ್ಯುಮೋನಿಯೇ ಬ್ಯಾಕ್ಟೀರಿಯಾ, ಎಚ್ಪಿವಿ (HPV) ಪರೀಕ್ಷೆ, ಹೊಸ ಲಸಿಕೆಗಳ ಅಭಿವೃದ್ಧಿ, ರೋಗವಾಹಕಗಳ ಮೂಲಕ ಹರಡುವ ರೋಗಗಳು, ಬಾಲ್ಯದ ಅಪೌಷ್ಟಿಕತೆ ಹಾಗೂ 'ಒನ್ ಹೆಲ್ತ್' (ಏಕ ಆರೋಗ್ಯ) ದೃಷ್ಟಿಕೋನದ ಕುರಿತು ವಿವಿಧ ತಜ್ಞರ ಅಧಿವೇಶನಗಳು ನಡೆದವು. ವೃತ್ತಿಜೀವನದ ಆರಂಭಿಕ ಹಂತದ ಮತ್ತು ಅನುಭವಿ ಸಂಶೋಧಕರಿಗೆ ತಮ್ಮ ಪ್ರಬಂಧಗಳನ್ನು ಮಂಡಿಸಲು ಪೋಸ್ಟರ್ ಅಧಿವೇಶನಗಳನ್ನು ಆಯೋಜಿಸಲಾಗಿತ್ತು. ಅಂತಿಮವಾಗಿ ಪೋಸ್ಟರ್ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಭಾಷಣದೊಂದಿಗೆ ಸಮ್ಮೇಳನವು ಸಂಪನ್ನಗೊಂಡಿತು.